ಇಂಜಿನಿಯರ್ ಗೆ ಫೈನಾನ್ಸಿಯಲ್ ಸೇಲ್ಸ್ ಉತ್ತಮ ವೃತ್ತಿ ಆಯ್ಕೆಯೇ?

ಒಂದಾನೊಂದು ಕಾಲದಲ್ಲಿ ಇಂಜಿನಿಯರ್ ಗಳು ಎಂದರೆ ಅತ್ಯಂತ ಗೌರವ ದೊರಕುತ್ತಿತ್ತು. ಭಾರಿ ವೇತನ ಪಡೆಯುವ ಉದ್ಯೋಗಗಳಲ್ಲಿ ಇಂಜಿನಿಯರ್ ಕೂಡ ಒಂದಾಗಿತ್ತು. ಆದರೆ ಸಮಯ ಕಳೆಯುತ್ತಿದ್ದಂತೆ ಎಲ್ಲರಲ್ಲೂ “ನಾನು ಇಂಜಿನಿಯರಿಂಗ್ ಓದಬೇಕು” ಅಥವಾ “ನನ್ನ ಮಗ/ಮಗಳು ಇಂಜಿನಿಯರಿಂಗ್ ಮಾಡಬೇಕು” ಎನ್ನುವ ಆಸೆ ಚಿಗುರೊಡೆಯಲು ಪ್ರಾರಂಭಿಸಿತು.ಆಗಲೇ ಇಂಜಿನಿಯರಿಂಗ್ ಓದುವವರ ಮತ್ತು ಪ್ರತಿ ವರ್ಷ ಇಂಜಿನಿಯರಿಂಗ್ ಪದವಿ ಪಡೆಯುವವರ ಸಂಖ್ಯೆ ಇಂಜಿನಿಯರಿಂಗ್ ಉದ್ಯೋಗಾವಕಾಶಗಳಿಗಿಂತ ಹೆಚ್ಚಾಗಿದ್ದು.

 ಭಾರತದಲ್ಲಿ, ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪದವೀಧರರಾಗುತ್ತಿರುವ ವಿದ್ಯಾರ್ಥಿಗಳು  ಇಂಜಿನಿಯರ್ ಗಳೇ ಎಂದರೆ ತಪ್ಪಾಗಲಾರದು. ಕೇವಲ ಕರ್ನಾಟಕ ರಾಜ್ಯದಲ್ಲಿಯೇ 210 ಇಂಜಿನೀಯರಿಂಗ್ ಕಾಲೇಜುಗಳಿವೆ. ಪ್ರತಿ ವರ್ಷ ಪ್ರತಿ ಕಾಲೇಜಿನಿಂದ ಸರಾಸರಿ 250 ವಿದ್ಯಾರ್ಥಿಗಳು ಇಂಜಿನೀರಿಂಗ್ ಪದವಿ ಹೊಂದುತ್ತಾರೆ ಎಂದು ಪರಿಗಣಿಸಿದರೆ, ಪ್ರತಿ ವರ್ಷ ಐವತ್ತು ಸಾವಿರಕ್ಕಿಂತಲೂ ಹೆಚ್ಚಿನ ಇಂಜಿನೀಯರ್  ಗಳು ಕಾಲೇಜಿನಿಂದ ಹೊರಬೀಳುತ್ತಾರೆ. ಪ್ರತಿ ವಿದ್ಯಾರ್ಥಿಯೂ ತನ್ನ ವೃತ್ತಿ ಜೀವನ ಪ್ರಾರಂಭಿಸಲು ಹಪಹಪಿಸುವವರೇ. 

ಹಿಂದಿನ ಕಾಲದಲ್ಲಿ, ವೃತ್ತಿಪರ ಶಿಕ್ಷಣ ಪಡೆದುಕೊಂಡವರ ಸಂಖ್ಯೆ ಅತೀ ಕಡಿಮೆ ಇತ್ತು. ಅದರೊಂದಿಗೆ, ಉದ್ಯೋಗದ ಅವಕಾಶಗಳು ಹೆಚ್ಚಿದ್ದವು. ಆಗಿನ ಕಾಲದಲ್ಲಿ, ಕೇವಲ ಪ್ರೌಢಶಿಕ್ಷಣ ಪಡೆದರೂ, ಉದ್ಯೋಗಾವಕಾಶಗಳು ನಿಮ್ಮ ಮನೆಯ ಬಾಗಿಲು ತಟ್ಟುತ್ತಿದ್ದವು. ಸುಲಭವಾಗಿ ನೌಕರಿ ದೊರಕುತ್ತಿತ್ತು. ಆಗ ಜನಸಂಖ್ಯೆಯೂ ಕಡಿಮೆ, ಸಾಕ್ಷರತಾ ಪ್ರಮಾಣವೂ ಕಡಿಮೆ, ಅದರೊಂದಿಗೆ ಬಡತನ ಎಲ್ಲೆಡೆ ನೆರೆಯೂರಿತ್ತು. ಆದರೆ, ಪ್ರಸಕ್ತ ಕಾಲಘಟ್ಟದಲ್ಲಿ, ಎಲ್ಲವೂ ಬದಲಾಗಿದೆ. ವಿಜ್ಞಾನದಿಂದ ತಂತ್ರಜ್ಞಾನದವರೆಗೆ ಭಾರತ ಎಲ್ಲೆಡೆ ಹೆಸರು ಮಾಡಿದೆ. ಜಗತ್ತಿನ ಎಲ್ಲಾ ಅಭಿವೃದ್ಧಿ ಹೊಂದಿರುವ ದೇಶಗಳೊಡನೆ ಭಾರತವೂ ಸೆಣಸಾಡುತ್ತಿದೆ. ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ ಸ್ಥಾನವನ್ನು ಭಾರತ ಅಲಂಕರಿಸಿದೆ. ಇವೆಲ್ಲದರ ಅನುಸಾರ ಭಾರತದಲ್ಲಿ ಇಂಜಿನಿಯರಿಂಗ್ ಉದ್ಯೋಗ ಅವಕಾಶಗಳು ಹೆಚ್ಚಿದ್ದರೂ, ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಇಂಜಿನಿಯರ್ ಗಳು ಪದವಿ ಪಡೆಯುತ್ತಿದ್ದಾರೆ. ಹೀಗಾಗಿ, ಇಂಜಿನಿಯರ್ ಗಳಿಗೆ ಉದ್ಯೋಗ ಅವಕಾಶಗಳ ಕೊರತೆ ಅತೀ ದೊಡ್ಡ ಶಾಪವಾಗಿದೆ. 

ಇದೇ ಕಾರಣದಿಂದಾಗಿ ಇಂದಿನ ಕಾಲದ ಇಂಜಿನಿಯರ್ ಗಳು ಎಲ್ಲಾ ಕ್ಷೇತ್ರದ ವಿವಿಧ ಬಗೆಯ ಉದ್ಯೋಗ ಅವಕಾಶಗಳನ್ನು ಸಂತೋಷವಾಗಿ ಸ್ವೀಕರಿಸುತ್ತಿದ್ದಾರೆ. ಅದರಲ್ಲಿ ಫೈನಾನ್ಸಿಯಲ್ ಸೇಲ್ಸ್ ಸಹ ಒಂದು. ಫೈನಾನ್ಸಿಯಲ್ ಸೇಲ್ಸ್ ಎಂದರೇನು? ಅದು ಇಂಜಿನಿಯರ್ ಗಳಿಗೆ ಸೂಕ್ತ ವೃತ್ತಿಯೇ? 

ಫೈನಾನ್ಸಿಯಲ್ ಸೇಲ್ಸ್ ಎಂದರೇನು?

ಸಾಮಾನ್ಯ ಗ್ರಾಹಕನಿಗೆ, ಶೇರ್ ಗಳು, ಬಾಂಡ್ ಗಳು ಅಥವಾ ನಿವೃತ್ತಿ ಯೋಜನೆಗಳನ್ನು ಅರ್ಥೈಸಿಕೊಂಡು, ಮೌಲ್ಯ ಮಾಪನ ಮಾಡಿ, ಖರೀದಿಸುವುದು ಖಂಡಿತವಾಗಿಯೂ ದೊಡ್ಡ ತಲೆನೋವು. ಸಾಮಾನ್ಯ ಗ್ರಾಹಕನಿಗೆ ಇದು ಅರ್ಥವಾಗದ ವ್ಯವಹಾರ. ಇಂತಹ ಗ್ರಾಹಕರಿಗೆ ಸಹಾಯ ಮಾಡುವುದೇ ಫೈನಾನ್ಸಿಯಲ್ ಸೇಲ್ಸ್ ರೆಪ್ರೆಸೆಂಟೇಟಿವ್ ಜವಾಬ್ದಾರಿ. 

ಫೈನಾನ್ಸಿಯಲ್ ಸೇಲ್ಸ್ ರೆಪ್ರೆಸೆಂಟೇಟಿವ್ ಖರೀದಿದಾರರು ಮಾರಾಟಗಾರರನ್ನು ಸಂಪರ್ಕಿಸಲು ಸಹಾಯ ಮಾಡುತ್ತಾರೆ. ಅದರೊಂದಿಗೆ, ಹಣಕಾಸು ಸೇವೆಗಳ ಮಾರಾಟದ ಬಗ್ಗೆ ತಿಳಿಸಿ, ಖರೀದಿದಾರನಿಗೆ ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತಾರೆ. 

ಫೈನಾನ್ಸಿಯಲ್ ಸೇಲ್ಸ್ ರೆಪ್ರೆಸೆಂಟೇಟಿವ್ ಗಳ ಕೆಲವು ವೃತ್ತಿ ಜವಾಬ್ದಾರಿಗಳು ಇಂತಿವೆ. 

  • ಗ್ರಾಹಕರ ಮೇಲ್ವಿಚಾರಣೆ ನಡೆಸಿ ಅವರ ಅಗತ್ಯತೆಗಳನ್ನು ಗುರುತಿಸಿ, ಗ್ರಾಹಕರೊಂದಿಗೆ ಸಮರ್ಥಸಂವಾದ ನಡೆಸುವುದು. ಇದರ ಸಹಾಯದಿಂದ ಸೂಕ್ತ ಗ್ರಾಹಕರ ಬ್ಯಾಂಕ್ ರಚಿಸುವುದು. 
  • ಗ್ರಾಹಕರ ಅಗತ್ಯತೆಗಳ ಅನುಸಾರ, ಹಣಕಾಸಿನ ತಂತ್ರಗಳನ್ನು ಮತ್ತು ಯೋಜನೆಗಳನ್ನು ರಚಿಸುವುದು. ಮತ್ತು ಗ್ರಾಹಕರಿಗೆ ಅಗತ್ಯವಿರುವ ನಿರ್ದಿಷ್ಟ ಹಣಕಾಸಿನ ಉತ್ಪನ್ನಗಳನ್ನು ಶಿಫಾರಸ್ಸು ಮಾಡುವುದು.
  •  ಎಲ್ಲಾ ಬಗೆಯ ಹಣಕಾಸು ಮಾರಾಟ ಅಥವಾ ಖರೀದಿಸುವ ಪ್ರಕ್ರಿಯೆಯನ್ನು ಮೇಲ್ವಿಚಾರಿಸಿ, ಅದರ  ಸಂಬಂಧಿತ ಎಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಿ.
  • ಹಣಕಾಸಿನ ವಿಷಯದ ಕುರಿತು ಗ್ರಾಹಕರ ಎಲ್ಲಾ ಪ್ರಶ್ನೆಗಳನ್ನು ಉತ್ತರಿಸುವುದು ಮತ್ತು ಅವರ ದೂರುಗಳಿಗೆ ಸ್ಪಂದಿಸಿ, ಸೂಕ್ತ ಮತ್ತು ಪರಿಣಾಮಕಾರಿ ಪರಿಹಾರವನ್ನು ಒದಗಿಸುವುದು.
  • ಫೈನಾನ್ಸಿಯಲ್ ಸೇಲ್ಸ್ ಸಂಬಂಧಿತ ಎಲ್ಲಾ ಡಿಪಾರ್ಟ್ಮೆಂಟ್ಸ್ ಗಳ ಜೊತೆ ಸಮನ್ವಯವಾಗಿ ಕಾರ್ಯ ನಿರ್ವಹಿಸಿ, ಗ್ರಾಹಕರ ಅಗತ್ಯತೆಗಳನ್ನು ಪೂರೈಸುವುದು.
  • ಎಲ್ಲಾ ಆಡಿಟ್ ನೀತಿಗಳನ್ನು ಪಾಲಿಸಿ, ವ್ಯಾಖ್ಯಾನಿಸಿ ಮತ್ತು ಅದನ್ನು ಅನುಸರಿಸುವುದು.
  • ಸೇಲ್ಸ್ ಸಿಬ್ಬಂದಿಗೆ ತರಬೇತಿ ನೀಡುವುದು.
  • ತಂತ್ರಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಗ್ರಾಹಕರ ಎಲ್ಲಾ ಹಣಕಾಸಿನ ಉದ್ದೇಶಗಳನ್ನು ಸಾಧಿಸಲು ಅಗತ್ಯವಿರುವ ಮಾಹಿತಿಯನ್ನು ವಿಶ್ಲೇಷಿಸುವುದು.
  • ಮ್ಯೂಚುಯಲ್ ಫೈಂಡ್, ಅನ್ನುಇಟಿಎಸ್ (ವರ್ಷಾಶನಗಳು) ಮತ್ತು ಇನ್ಶೂರೆನ್ಸ್ (ವಿಮೆ) ಯಂತಹ ಹಣಕಾಸಿನ ಉತ್ಪನ್ನಗಳನ್ನು ಮಾರಾಟ ಮಾಡಲು ಅಗತ್ಯವಿರುವ ತಂತ್ರಗಳನ್ನು ಅಭಿವೃದ್ಧಿ ಪಡಿಸುವುದು.

ಮೇಲೆ ನೀಡಿರುವ ಎಲ್ಲಾ ಜವಾಬ್ದಾರಿಗಳನ್ನು ಒಬ್ಬ ಇಂಜಿನಿಯರ್ ಸೂಕ್ತವಾಗಿ ನಿರ್ವಹಿಸಬಲ್ಲನೆ? ಫೈನಾನ್ಸಿಯಲ್ ಸೇಲ್ಸ್ ವೃತ್ತಿ ಇಂಜಿನಿಯರ್ ಗೆ ಸೂಕ್ತವೇ? ಅದಕ್ಕೆ ಉತ್ತರ ಮುಂದಿನ ಭಾಗದಲ್ಲಿ ವಿಶ್ಲೇಷಿಸಿದ್ದೇವೆ. 

ಫೈನಾನ್ಸಿಯಲ್ ಸೇಲ್ಸ್ ಇಂಜಿನಿಯರ್ ಗಳಿಗೆ ಸೂಕ್ತವೇ?

ವೃತ್ತಿ ಕ್ಷೇತ್ರದಲ್ಲಿ ಯಾವುದೇ ಉದ್ಯೋಗ ಉತ್ತಮವಾದದ್ದು ಅಥವಾ ಕೀಳಾದದ್ದು ಎಂದಿಲ್ಲ. ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಪಡೆಯುವುದು ಪ್ರತಿಯೊಬ್ಬರ ವೈಯಕ್ತಿಕ ಕಾರ್ಯ ನಿಷ್ಠೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ಇಂಜಿನಿಯರ್ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲಿ ಸೂಕ್ತ ಯಶಸ್ಸನ್ನು ಕಾಣಬಹುದೇ? ಖಂಡಿತವಾಗಿಯೂ! ಅದಕ್ಕೆ ಕಾರಣಗಳು ಇಲ್ಲಿವೆ. 

ಇಂಜಿನಿಯರಿಂಗ್ ಅಧ್ಯಯನ ಮಾಡುವಾಗ ಕಲಿಯುವ ಕೌಶಲ್ಯಗಳು

ಇಂಜಿನಿಯರಿಂಗ್ ಅಧ್ಯಯನ ಮಾಡುವಾಗ ಸಾಮಾನ್ಯವಾಗಿ ವಿದ್ಯಾರ್ಥಿಗಳು ಪಠ್ಯಕ್ರಮದ ಅಧ್ಯಯನ ಅಷ್ಟೇ ಅಲ್ಲದೇ ಸಾಮಾನ್ಯ ಜ್ಞಾನ, ಶಿಷ್ಟಾಚಾರ, ಸಾಮರ್ಥ್ಯ ಬೆಳವಣಿಗೆ, ಇತ್ಯಾದಿ ಅಗತ್ಯವಿರುವ ಕುಶಲತೆಯನ್ನು ವಿದ್ಯಾರ್ಥಿಗಳು ಕಳೆಯುತ್ತಾರೆ. ಇಂತಹ ಕೌಶಲ್ಯಗಳು ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲೂ ಯಶಸ್ಸು ಕಾಣಲು ಸಹಾಯ ಮಾಡುತ್ತದೆ.

ಸಂಖ್ಯೆಗಳಲ್ಲಿ ಪ್ರಾವೀಣ್ಯತೆ

“ಫೈನಾನ್ಸ್” ಅಥವಾ ಹಣಕಾಸು ಎನ್ನುವ ಶಬ್ದ ಕೇಳಿದ ತಕ್ಷಣ ಪ್ರತಿಯೊಬ್ಬರೂ ಯೋಚಿಸುವುದು ಹಣದ ಒಳ ಹರಿವು, ಹೊರ ಹರಿವು, ಸಂಕೀರ್ಣ ಲೆಕ್ಕಾಚಾರಗಳು, ಇತ್ಯಾದಿ. ಇವೆಲ್ಲವುಗಳನ್ನು ಪ್ರತಿನಿಧಿಸುವುದು ಅಥವಾ ಪ್ರಕಟಿಸಲು ಬಳಸುವುದು “ಸಂಖ್ಯೆಗಳನ್ನು”. ಇಂಜಿನಿಯರ್ ಗಳು ಸಾಮಾನ್ಯವಾಗಿ ಇಂತಹ ಸಂಖ್ಯೆಗಳು, ಲೆಕ್ಕಾಚಾರಗಳಲ್ಲಿ ಪರಿಣಿತರಾಗಿರುತ್ತಾರೆ. ಏಕೆಂದರೆ ಇಂಜಿನಿಯರ್  ಪದವೀಧರರು ತಮ್ಮ ಪದವಿ ಪೂರ್ವ ಶಿಕ್ಷಣದಲ್ಲಿ, ತಮ್ಮ ಇಂಜಿನಿಯರಿಂಗ್ ಶಿಕ್ಷಣದಲ್ಲಿ (ಕನಿಷ್ಠ ಮೂರು ಸೆಮಿಸ್ಟರ್) ಗಣಿತವನ್ನು ಓದಿ, ತಿಳಿದುಕೊಂಡಿರುತ್ತಾರೆ. ಹಾಗಾಗಿ, ಇಂಜಿನಿಯರಿಂಗ್ ಪದವಿ ಪಡೆಯುವ ಸಮಕ್ಕಾಗಲೇ ತಕ್ಕ ಮಟ್ಟಿಗೆ ಸಂಖ್ಯೆಗಳಲ್ಲಿ, ಲೆಕ್ಕಾಶಾಸ್ತ್ರದಲ್ಲಿ ಪರಿಣತಿ ಪಡೆದಿರುತ್ತಾರೆ. ಇದರಿಂದ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲಿ ಆಗುವ ಉಪಯೋಗವೇನು?

ಸಂಖ್ಯೆ ಮತ್ತು ಲೆಕ್ಕಾಶಾಸ್ತ್ರದಲ್ಲಿ ಪ್ರಾವೀಣ್ಯತೆಯನ್ನು ಹೊಂದುವ ಪ್ರಯೋಜನವೆಂದರೆ ಇಂಜಿನಿಯರ್ ಪದವೀಧರರು ತಮ್ಮ ಗ್ರಾಹಕರಿಗೆ ಹಣಕಾಸಿನ ಹೂಡಿಕೆಯನ್ನು ವಿವರಿಸುವಾಗ ತಮ್ಮ ತಾರಿಕೀಕತೆಯನ್ನು ಸಹ ಬಳಸಬಹುದು. ಇದರಿಂದ ಸಹಜವಾಗಿ ಕ್ಲೈಂಟ್ ಅಥವಾ ಗ್ರಾಹಕರಿಗೆ ಹೆಚ್ಚು ಮನವರಿಕೆ ಮಾಡಬಹುದು. ಅಷ್ಟೇ ಅಲ್ಲದೇ, ಇಂಜಿನಿಯರ್ ಪದವೀಧರರು ಈಗಾಗಲೇ ಸಂಖ್ಯಾತ್ಮಕ ಸಾಮರ್ಥ್ಯವನ್ನು ಹೊಂದಿರುವುದರಿಂದ, ಫೈನಾನ್ಸಿಯಲ್ ಸೇಲ್ಸ್ ಸಂಬಂಧಿತ ಕೌಶಲ್ಯಗಳನ್ನು (ಉದಾಹರಣೆಗೆ:  ಫಂಡ್ ಅಥವಾ ಬಂಡವಾಳ ಹೇಗೆ ಬೆಳೆಯುತ್ತದೆ; ಲೋನ್ ಅಥವಾ ಸಾಲದ ಬಡ್ಡಿ ಹೇಗೆ ಹೆಚ್ಚುತ್ತದೆ; ಫೈನಾನ್ಸಿಯಲ್ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡಬೇಕು, ಇತ್ಯಾದಿ) ಕಲಿತುಕೊಳ್ಳುವುದು ಸುಲಭ. 

ಆನ್ಲೈನ್ ಮಾರ್ಕೆಟಿಂಗ್ ಪ್ಲಾಟ್ಫಾರ್ಮ್ ಗಳಲ್ಲಿ ನಿಪುಣರು

ಪುಸ್ತಕ ಯುಗ ತಂತ್ರಜ್ಞಾನದ ಯುಗವಾಗಿ ಪರಿವರ್ತನೆ ಆಗುತ್ತಿದೆ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಕಾಲದಲ್ಲಿ ಒಬ್ಬ ಸಣ್ಣ ಮಗಿವಿನಿಂದ ವಯಸ್ಸಾದ ಮುದುಕನ ವರೆಗೂ ಎಲ್ಲರಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಛಾಪನ್ನು  ಮೂಡಿಸಿದೆ. ವಿಶೇಷವಾಗಿ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ತಂತ್ರಜ್ಞಾನ ಅಥವಾ ಇಂಟರ್ನೆಟ್ ಇಲ್ಲದಿದ್ದರೇ, ಇಂಜಿನೀರಿಂಗ್ ಗೇ ಇಲ್ಲವೇನೋ ಎನ್ನುವಂತಾಗಿದೆ. ಅದಕ್ಕೆ ಕಾರಣ ಹಲವಾರು.

ಇಂಜಿನಿಯರಿಂಗ್ ಓದುವಾಗ ಪ್ರತಿಯೊಬ್ಬ ಇಂಜಿನಿಯರ್ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ನಿಪುಣರಾಗುವುದು ಸರ್ವೇ ಸಾಮಾನ್ಯ. ಅದಕ್ಕೆ  ಕಾರಣ ಇಂಜಿನಿಯರಿಂಗ್ ನ ಹಲವಾರು ಶೈಕ್ಷಣಿಕ ಸಂಪನ್ಮೂಲ ಗಳು ಆನ್ಲೈನ್ ಲಭ್ಯವಿರುತ್ತದೆ. ಇದರಿಂದಾಗಿ ಪ್ರತಿಯೊಬ್ಬ ಇಂಜಿನಿಯರ್ ಆನ್ಲೈನ್ ಪ್ರಪಂಚದೊಂದಿಗೆ ಸಾಕಷ್ಟು ಅನುಭವವನ್ನು ಪಡೆಯುತ್ತಾರೆ. ಅದರೊಂದಿಗೆ ಪ್ರತಿಯೊಬ್ಬ ಇಂಜಿನಿಯರ್  ಸಾಮಾನ್ಯವಾಗಿ ವಿವಿಧ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳು ಮತ್ತು ಯೂಟ್ಯೂಬ್, ನೆಟ್ ಫ್ಲಿಕ್ಸ್, ಅಮೆಝೋನ್ ಪ್ರೈಮ್, ಇತ್ಯಾದಿ ಆನ್ಲೈನ್ ಪ್ಲಾಟ್ಫಾರ್ಮ್ ಅಥವಾ ಪೋರ್ಟಲ್ ಗಳನ್ನು ಬಳಸುತ್ತಾರೆ. ಇದರಿಂದ ಅವರ ಹೆಚ್ಚಿನ ಸಮಯ ಇಂತಹ ಪೋರ್ಟಲ್ ಗಳಲ್ಲಿ ಪರಿಣಿತರಾಗಲು ಉಪಯುಕ್ತವಾಗುತ್ತದೆ. 

ಇಂದಿನ ಡಿಜಿಟಲ್ ಇಂಡಿಯಾ ಕಾಲದಲ್ಲಿ ಎಲ್ಲವೂ ಡಿಜಿಟಲ್ ಅಥವಾ ಆನ್ಲೈನ್ ವ್ಯವಹಾರವಾಗಿ ನಡೆಯುತ್ತಿರುವಾಗ ಆನ್ಲೈನ್ ಪ್ಲಾಟ್ಫಾರ್ಮ್ ಮತ್ತು ಆನ್ಲೈನ್ ಜ್ಞಾನ ವಿರುವವರಿಗೆ ಹೆಚ್ಚಿನ ಬೇಡಿಕೆ ಇರುವುದು ಸಾಮಾನ್ಯ. ಹಣಕಾಸು ಹೂಡಿಕೆ ಸಂಬಂಧಿತ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಉದ್ದೇಶ ಭಾರತ ಖಂಡಿತವಾಗಿಯೂ ಹೊಂದಿದೆ. ಅದರೊಂದಿಗೆ ಮ್ಯೂಚುಯಲ್ ಫಂಡ್ ಅಥವಾ ಫಂಡ್ ಗಳ ಮಾರಾಟ ಆನ್ಲೈನ್ ಆಗುವ ಹಿನ್ನೆಲೆಯಲ್ಲಿ ಇನ್ಲೈನ್ ಜ್ಞಾನ ಹೊಂದಿರುವ ಅಭ್ಯರ್ಥಿ  ಗಳಿಗೆ ಬೇಡಿಕೆ ಹೆಚ್ಚಿದೆ. ಇದೇ ಕಾರಣದಿಂದಾಗಿ ಇಂಜಿನಿಯರ್ ಗಳಿಗೆ ಫೈನಾನ್ಸಿಯಲ್ ಸೇಲ್ಸ್ ಸುಲಭ ಮತ್ತು ಸೂಕ್ತವಾಗಬಹುದು. 

ಅದರೊಂದಿಗೆ, ಅಂತರ್ಜಾಲ ಮತ್ತು ಅದರ ಉಪಯೋಗವನ್ನು ತಿಳಿದುಕೊಂಡಿರುವ ಇಂಜಿನಿಯರಿಂಗ್ ಪದವೀಧರರು ಸಾಮಾಜಿಕ ಜಾಲತಾಣವನ್ನು ಒಂದು ರಾಮಬಾಣವನ್ನಾಗಿ ಬಳಸಿಕೊಂಡು ತಾವು ಒದಗಿಸುತ್ತಿರುವ ಸೇವೆ ಅಥವಾ ಸರಕಿನ ಜಾಹೀರಾತುಗಳನ್ನು ಪ್ರಕಟಿಸಿ, ಲಾಭೋಪಾಯವನ್ನಾಗಿಸಿ ಕೊಳ್ಳಬಹುದು. ಇಂಜಿನಿಯರ್ ಗಳಿಗಿರುವ ತಂತ್ರಜ್ಞಾನದ ತಿಳುವಳಿಕೆಯಿಂದ ಸುಲಭವಾಗಿ ಗ್ರಾಹಕರನ್ನು ತಲುಪಲು ಮತ್ತು ಅದರಿಂದ ಯಶಸ್ಸು ಗಳಿಸಲು ದಾರಿಯನ್ನು ಮಾಡಿಕೊಡುತ್ತದೆ.

ಗೆದ್ದೇ ತೀರುವ ಛಲ

ಇಂಜಿನಿಯರ್ ಪದವೀಧರರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೇ ಹಲವಾರು ಬೇರೆ ಕ್ಷೇತ್ರದಲ್ಲಿ ಸಹ ಹೆಸರು ಗಳಿಸಿದ್ದಾರೆ. ಮೆಕ್ಯಾನಿಕಲ್ ಇಂಜಿನಿಯರ್ ಪದವೀಧರರಾಗಿದ್ದರೂ ಕ್ರಿಕೆಟ್ ನಲ್ಲಿ ಯಶಸ್ಸು ಪಡೆದಿರುವ ಅನಿಲ್ ಕುಂಬ್ಳೆ, ಕೆಮಿಕಲ್ ಇಂಜಿನಿಯರಿಂಗ್ ಪದವೀಧರರಾಗಿದ್ದರೂ ಕ್ರಿಕೆಟ್ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಹರ್ಷ ಬೋಗ್ಲೆ, ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಧರರಾದ  ರೋವನ್ ಅಟಕಿಂಸೊನ್ (ಮಿಸ್ಟರ್ ಬೀನ್ ಎಂಬ ಪ್ರಖ್ಯಾತಿ ಪಡೆದಿದ್ದಾರೆ) ಹಾಸ್ಯ ನಟರಾಗಿ ಯಶಸ್ವಿ ಗಳಿಸಿದ್ದಾರೆ – ಈ ರೀತಿಯ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಒಟ್ಟಿನಲ್ಲಿ ಇಂಜಿನಿಯರ್ ಗಳು ಯಾವುದೇ ಕ್ಷೇತ್ರವನ್ನು ಆಯ್ದುಕೊಂಡರೂ, ಅವರು ಯಶಸ್ಸನ್ನು ಗಳಿಸಲು ಹರಸಾಹಸ ಮಾಡುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ.

ಸಾಮಾನ್ಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ಉದ್ಯೋಗವೇ ಆಗಲಿ ಅಥವಾ ಫೈನಾನ್ಸಿಯಲ್ ಸೇಲ್ಸ್ ಉದ್ಯೋಗವೇ ಆಗಲಿ, ನಿರಾಕರಣೆ, ಮತ್ತು ಸೋಲು ಈ ಕ್ಷೇತ್ರದ ಮತ್ತು ಈ ಉದ್ಯೋಗದ ಒಂದು ಭಾಗವಾಗಿದೆ. ಏಕೆಂದರೆ ಈ ಉದ್ಯೋಗದಲ್ಲಿ ನಿಮ್ಮ ಉತ್ಪನ್ನಗಳನ್ನು ಖರೀದಿಸುವವರು ಸಿಗದೇ ಅಥವಾ ನಿಮ್ಮಿಂದ ಯಾವುದೇ ಉತ್ಪನ್ನಗಳು ಮಾರಾಟವಾಗದೇ, ಹಲವು ದಿನಗಳೇ ಕಳೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ಮನುಷ್ಯ ನಿರಾಶೆ, ಅನುಮಾನ ಗಳಿಗೆ ಒಳಗಾಗುವುದು ಸಾಮಾನ್ಯ. ಇದರಿಂದಾಗಿ ಮಾಡುತ್ತಿರುವ ಕೆಲಸವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ, ಸುಲಭವಾದ ಉದ್ಯೋಗ ಹುಡುಕಬೇಕು ಎಂದು ಅನ್ನಿಸುವುದು ಸಹ ಸಾಮಾನ್ಯ. ಆದರೆ ಇಂಜಿನಿಯರ್ ಪದವೀಧರರು ಇಂತಹ ಪರಿಸ್ಥಿತಿಗಳಿಗೆ ಸುಲಭವಾಗಿ ಕುಗ್ಗಲಾರರು. ಅದಕ್ಕೆ ಕಾರಣ ಇಂಜಿನಿಯರಿಂಗ್ ಓದುತ್ತಿರುವಾಗ ಈ ಅಭ್ಯರ್ಥಿಗಳು ಅನುಭವಿಸುವ ಒತ್ತಡ. ಇಂಜಿನಿಯರಿಂಗ್ ಶೈಕ್ಷಣಿಕ ಪದವಿ ಅಧ್ಯಯನ ಮಾಡುವಾಗ ಸಾಮಾನ್ಯವಾಗಿ ಪ್ರತಿ ಅಭ್ಯರ್ಥಿ ಹಲವಾರು ಪರೀಕ್ಷೆಗಳನ್ನು, ನಿಯೋಜನೆ ಅಥವಾ ಅಸೈನ್ಮೆಂಟ್ಸ್  ಗಳನ್ನು, ಕ್ವಿಜ್ ಗಳನ್ನು ಮತ್ತುಇತ್ಯಾದಿ ಒತ್ತಡ ಉಂಟು ಮಾಡಬಹುದಾದ ಹಲವಾರು ಪಠ್ಯಕ್ರಮಗಳನ್ನು ಅನುಭವಿಸಿರುತ್ತಾರೆ. ಹಾಗಾಗಿ, ಇಂಜಿನಿಯರ್ ಗಳು ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲಿ ಕೆಲಸವನ್ನುಆಯ್ದುಕೊಂಡರೆ, ಫೈನಾನ್ಸಿಯಲ್ ಸೇಲ್ಸ್ ಉದ್ಯೋಗ ಸಂಬಂಧಿತ ಎಲ್ಲಾ ಒತ್ತಡಗಳನ್ನು ಎದುರಿಸಿ, ಹೋರಾಡುವ ಸಾಮರ್ಥ್ಯ ಅವರಲ್ಲಿರುತ್ತದೆ.

ಅದರೊಂದಿಗೆ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲಿ ಸರ್ವೇ ಸಾಮಾನ್ಯವಾಗಿ ವಾಣಿಜ್ಯ ಶಾಸ್ತ್ರವನ್ನು ಓದಿರುವ, ಅರ್ಥೈಸಿಕೊಂಡಿರುವ ಮತ್ತು ಆ ವಿಷಯದಲ್ಲಿ ನಿಪುಣರಾಗಿರುವ ಘಟಾನುಘಟಿಗಳ ಕ್ಷೇತ್ರ ವಾಗಿರುತ್ತದೆ. ಇದರಲ್ಲಿ ಅವರವರ ನಡುವೆಯೇ ಹೆಚ್ಚಿನ ಪೈಪೋಟಿ ಏರ್ಪಾಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಬೇರೆ ಕ್ಷೇತ್ರದ ಅಥವಾ ರೀತಿಯ ಶಿಕ್ಷಣವನ್ನು ಅಭ್ಯಸಿಸಿ ನಂತರ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರಕ್ಕೆ ಪ್ರವೇಶಿಸಿ ಸಾಧನೆಗೆ ಗೈಯುವುದು ಅಷ್ಟು ಸುಲಭದ ಮಾತಲ್ಲ. ಅದು ಒಂದು ರೀತಿಯ ಭಾಷೆ ಬಾರದ ದೇಶದಲ್ಲಿ ತಾವೊಬ್ಬರೇ ಜೀವಿಸಿದಂತೆ. ಆದರೆ ಇಂತಹ ಸಂದರ್ಭದಲ್ಲಿಯೂ ದೃತಿಗೆಡದೆ, ಗುರಿಯೆಡೆಗೆ ಏಕಚಿತ್ತದಿಂದ ಸಾಗುವ ಛಲ ಇಂಜಿನಿಯರಿಂಗ್ ಪದವೀಧರರಿಗೆ ಇದೆ ಎನ್ನುವುದನ್ನು ನಾವು ಖಂಡಿತವಾಗಿಯೂ ಒಪ್ಪಿಕೊಳ್ಳಲೇ ಬೇಕು. 

ಪಿಚ್ ಪ್ರಸ್ತಾಪಿಸುವಲ್ಲಿ ಮತ್ತು ಕ್ಲೈಂಟ್ ಮನವರಿಕೆ ಮಾಡುವಲ್ಲಿ ನೈಪುಣ್ಯತೆ

ಇಂಜಿನಿಯರಿಂಗ್ ಶಿಕ್ಷಣ ಎಂದರೆ ಕೇವಲ ಪಠ್ಯಕ್ರಮದ ಶಿಕ್ಷಣ ಅಲ್ಲ. ಅದು ವಿದ್ಯಾರ್ಥಿಗಳ ವ್ಯಕ್ತಿತ್ವದ ಒಟ್ಟಾರೆ ಅಭಿವೃದ್ಧಿ ಮಾತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಪ್ರತಿ ವರ್ಷ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ರಾಜ್ಯ ಮಟ್ಟದ ಮತ್ತು ರಾಷ್ಟ್ರೀಯ ಮಟ್ಟದ ತಾಂತ್ರಿಕ ಉತ್ಸವ ಅಥವಾ ಟೆಕ್ ಫೆಸ್ಟ್ ಅಥವಾ ಪಠ್ಯೇತರ ಕಾರ್ಯಕ್ರಮಗಳನ್ನು ಏರ್ಪಡಿಸುವುದು ಸಾಮಾನ್ಯ. ಇಂತಹ ಕಾರ್ಯಕ್ರಮಗಳನ್ನು ಸಾಮಾನ್ಯವಾಗಿ ವಿದ್ಯಾರ್ಥಿಗಳೇ ಏರ್ಪಡಿಸಬೇಕು ಎಂದು ಕಾಲೇಜು ಪ್ರೋತ್ಸಾಹಿಸುತ್ತದೆ. ಆದ್ದರಿಂದ, ಈ ಕಾಲೇಜು ಉತ್ಸವಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಪ್ರಾಯೋಜಕರನ್ನು ಹುಡುಕಲು, ಧನ ಸಹಾಯ ಪಡೆಯಲು ಎಲ್ಲಾ ಬಗೆಯ ಬ್ರಾಂಡ್ ಗಳನ್ನು ಮತ್ತು ಸಂಸ್ಥೆಗಳನ್ನು ವಿದ್ಯಾರ್ಥಿಗಳು ಅಥವಾ ಸಂಘಟನಾ ಸಮಿತಿಯ ಸದಸ್ಯರು ಸಂಪರ್ಕಿಸಬೇಕು. ಈ ಕಾರಣದಿಂದಾಗಿ ಇಂಜಿನಿಯರಿಂಗ್ ಪದವೀಧರರು ಸಾಮಾನ್ಯವಾಗಿ ತಮ್ಮ ಕಾಲೇಜಿನ ಸಮಯದಿಂದಲೇ ಪಿಚ್ ಮಾಡುವುದನ್ನು ಮತ್ತು ಅದರಿಂದಾಗುವ ಲಾಭಗಳನ್ನು ಹೂಡಿಕೆದಾರರಿಗೆ ಮನವರಿಕೆ ಮಾಡುವುದನ್ನು ಕಲಿತಿರುತ್ತಾರೆ.

ಅಷ್ಟೇ ಅಲ್ಲದೇ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾಮಾನ್ಯವಾಗಿ ಸಂಶೋಧನಾ ಮನೋಭಾವವನ್ನು ಹೊಂದಿರುವುದರಿಂದ ಹಲವಾರು ವಿದ್ಯಾರ್ಥಿಗಳು ನವನವೀನ ಆಲೋಚನೆಗಳೊಂದಿಗೆ ತಮ್ಮದೇ ಆದ ಸ್ಟಾರ್ಟ್ಅಪ್ ಸಂಸ್ಥೆ ಪ್ರಾರಂಭಿಸಲು ಬಯಸುವುದು ಸಾಮಾನ್ಯ.ಇಂತಹ ಸಂದರ್ಭದಲ್ಲಿ ಸಹ ವಿದ್ಯಾರ್ಥಿಗಳು ಹಲವಾರು ಸ್ಟಾರ್ಟ್ಅಪ್ ಇನ್ವೆಸ್ಟೊರ್ ಅಥವಾ ಹೂಡಿಕೆದಾರರ ಸಂಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ, ತಮ್ಮ ಉತ್ಪನ್ನ ಅಥವಾ ಆಲೋಚನೆಯ ಕುರಿತಾಗಿ ಪಿಚ್ ಮಾಡುತ್ತಾರೆ. ಇದರಿಂದಾಗಿಯೂ ಇಂಜಿನಿಯರಿಂಗ್ ಪದವೀಧರರು ಪಿಚ್ ತಯಾರಿಸುವ, ಅದನ್ನು ಪ್ರಸ್ತಾಪಿಸುವ ಮತ್ತು ಮನವೊಲಿಸುವ ಕೌಶಲ್ಯವನ್ನು ಕಲಿತಿರುತ್ತಾರೆ. ಇದರಿಂದಾಗಿ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು  ಸಹಾಯ ಮಾಡುತ್ತದೆ.

ಯೋಚಿಸುತ್ತಾ ಹೋದಂತೆ, ಇಂತಹ ಹಲವಾರು ಕಾರಣಗಳು ಇಂಜಿನಿಯರ್ ಪದವೀಧರರು ಫೈನಾನ್ಸಿಯಲ್ ಸೇಲ್ಸ್ ಉದ್ಯೋಗ ಕ್ಷೇತ್ರಕ್ಕೆ ಸೂಕ್ತ ಎನ್ನುವುದನ್ನು ಸಾಬೀತು ಪಡಿಸುತ್ತವೆ. ಆದರೆ ಫೈನಾನ್ಸಿಯಲ್ ಸೇಲ್ಸ್ ಸಂಬಂಧಿತ ಎಲ್ಲಾ ವಿಷಯಗಳನ್ನು ಶಾಲಾ ಕಾಲೇಜುಗಳಲ್ಲಿ ಅಥವಾ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇಂಜಿನಿಯರ್ ಪದವೀಧರರು ಕಲಿಯುವುದಿಲ್ಲ. ಆದರೆ ಈ ಕ್ಷೇತ್ರದ ಬಗ್ಗೆ ತಿಳಿದುಕೊಳ್ಳಲು ಮತ್ತು ಇದೇ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮನಸ್ಸಿದ್ದರೆ,  ಈ ಉದ್ಯೋಗವೇ ತನ್ನ ಕ್ಷೇತ್ರದಲ್ಲಿ ಯಶಸ್ವಿಯಾಗಲು ಅಗತ್ಯವಿರುವ, ಸಂದರ್ಭಗಳಿಗೆ ತಕ್ಕ ಜ್ಞಾನವನ್ನು ಮತ್ತು ಅನುಭವವನ್ನು ಅಭ್ಯರ್ಥಿಗಳಿಗೆ ನೀಡುತ್ತದೆ. ಅದನ್ನು ಪ್ರಾಮಾಣಿಕವಾಗಿ ಕಲಿತು, ರೂಡಿಸಿದಲ್ಲಿ, ಸಕಾರಾತ್ಮಕ ಫಲಿತಾಂಶ ಕಟ್ಟಿಟ್ಟ ಬುತ್ತಿ.

ಹಾಗಿದ್ದರೆ, ಇಂಜಿನಿಯರಿಂಗ್ ಕ್ಷೇತ್ರದಿಂದ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುವುದು ಹೇಗೆ? ನಿಮ್ಮ ಈ ಪ್ರಶ್ನೆಗೆ ಸಹ ನಾವು ಉತ್ತರ ನೀಡುತ್ತೇವೆ.

ಇಂಜಿನಿಯರಿಂಗ್ ಕ್ಷೇತ್ರದಿಂದ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುವುದು ಹೇಗೆ?

ಎಲ್ಲಾ ಬಗೆಯ ಫೈನಾನ್ಸ್ ಸಂಬಂಧಿತ ಉದ್ಯೋಗಗಳು, ಫೈನಾನ್ಸ್ ಪದವಿ ಅಥವಾ ಬಿಸಿನೆಸ್ ಪದವಿಯನ್ನು ಬಯಸುತ್ತವೆ. ಆದರೆ ನಿಮ್ಮ ಬಳಿ ಫೈನಾನ್ಸ್ ಪದವಿ ಅಥವಾ ಬಿಸಿನೆಸ್ ಪದವಿ ಇರದಿದ್ದರೆ, ಏನು ಮಾಡಬೇಕು? ಅದಕ್ಕೆ ಉತ್ತರ ಇಲ್ಲಿದೆ. 

ವೃತ್ತಿ ಪರಭಾಷೆ ಕಲಿಯಿರಿ

ನಿಮಗೆ ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರವನ್ನು ಸೇರುವ ಆಸಕ್ತಿ ಇದ್ದರೆ, ವಾಲ್ ಸ್ಟ್ರೀಟ್ ಗೆ ಸಂಬಂಧಿಸಿದ ಪರಿಭಾಷೆಯನ್ನು ಖಂಡಿತವಾಗಿಯೂ ಕಲಿಯಬೇಕು. ಡೈಲ್ಯೂಷನ್, ಡಿವಿಡೆಂಡ್, NPV , DCF ಮತ್ತು ಇನ್ನಿತರ ನಿಯಮಗಳು ಮತ್ತು ಪರಿಕಲ್ಪನೆಗಳನ್ನು ತಿಳಿದುಕೊಳ್ಳದಿದ್ದರೆ, ಫೈನಾನ್ಸಿಯಲ್ ಸೇಲ್ಸ್ ಉದ್ಯೋಗದ ಮೊದಲ ಹಂತದ ಸಂದರ್ಶನದಲ್ಲಿ ಸಹ ನೀವು ಉತ್ತೀರ್ಣರಾಗುವುದಿಲ್ಲ. ಹಾಗಾಗಿ ಫೈನಾನ್ಸ್ ಕ್ಷೇತ್ರಕ್ಕೆ ಸಂಬಂಧಿತ ಪರಿಭಾಷೆಯನ್ನು ಕಲಿತುಕೊಳ್ಳಿ. ಅದಕ್ಕಾಗಿ, ಇನ್ವೆಸ್ಟೊಪಿಡಿಯಾ ಅಥವಾ ದಿ ವಾಲ್ ಸ್ಟ್ರೀಟ್ ಜರ್ನಲ್, ಇತ್ಯಾದಿ ಸಂಪನ್ಮೂಲಗಳನ್ನು ಓದಿ, ಕಲಿತುಕೊಳ್ಳಿ. 

ಅಗತ್ಯವಿರುವ ಶಿಕ್ಷಣವನ್ನು ಪಡೆಯಿರಿ

ನೀವು ಫೈನಾನ್ಸ್ ಕ್ಷೇತ್ರ ಹೊರತು ಪಡಿಸಿ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಪದವಿ ಪಡೆದಿರಬಹುದು. ಆದರೆ ಅದರರ್ಥ ನೀವು ಫೈನಾನ್ಸ್ ಕ್ಷೇತ್ರದ ಬಗ್ಗೆ ಕಲಿಯಬಾರದು ಎಂದೇನಲ್ಲ. ಪದವಿಪೂರ್ವ ಅಥವಾ ಸ್ನಾತಕೋತ್ತರ ಮಟ್ಟದಲ್ಲಿ ಫೈನಾನ್ಸ್ ಅಥವಾ ಬಿಸಿನೆಸ್ ಸಂಬಂಧಿತ ಕೋರ್ಸ್ ಗಳನ್ನು ತೆಗೆದುಕೊಳ್ಳುವ ಮೂಲಕ ಈ ಹೊಸ ಕ್ಷೇತ್ರಕ್ಕೆ ಅಗತ್ಯವಿರುವ ಶೈಕ್ಷಣಿಕ ಜ್ಞಾನವನ್ನು ಪಡೆಯಬಹುದು. 

ಪದವೀಧರರು ಎಕನಾಮಿಕ್ಸ್ ಅಥವಾ ಅಕೌಂಟಿಂಗ್ ಅಥವಾ ಫೈನಾನ್ಸಿಯಲ್ ಅನಾಲಿಸಿಸ್ ತರಹದ ಕೋರ್ಸ್ ಗಳನ್ನು ಮಾಡಿಕೊಳ್ಳಬಹುದು. ಸ್ನಾತಕೋತ್ತರ ಪದವೀಧರರು  ಮಾಸ್ಟರ್ಸ್ ಇನ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಮಾಡಿಕೊಳ್ಳಬಹುದು. ಏಕೆಂದರೆ MBA ಯಲ್ಲಿ ಫೈನಾನ್ಸ್ ಕ್ಷೇತ್ರಕ್ಕೆ ಅಗತ್ಯವಿರುವ ವಿಷಯವನ್ನು ಕಲಿತುಕೊಳ್ಳಬಹುದು. 

ಫೈನಾನ್ಸ್ ಬೂಟ್ ಕ್ಯಾಂಪ್ ನಲ್ಲಿ ಭಾಗವಹಿಸಿ 

ವಾಲ್ ಸ್ಟ್ರೀಟ್ ಪ್ರೆಪ್ ಮತ್ತು ಟ್ರೇನಿಂಗ್ ದಿ ಸ್ಟ್ರೀಟ್ ತರಹದ ಕೋರ್ಸ್ ಗಳು ಫೈನಾನ್ಸ್ ವೃತ್ತಿಗೆ ಅಗತ್ಯವಿರುವ ಕೌಶಲ್ಯಗಳನ್ನು (ಉದಾಹರಣೆಗೆ: ಅಡ್ವಾನ್ಸ್ ಸ್ಪ್ರೆಡ್ ಶೀಟ್ ಟೆಕ್ನಿಕ್ ಮತ್ತು ಫೈನಾನ್ಸಿಯಲ್ ಮಾಡೆಲ್ಲಿಂಗ್)  ಕಲಿಸಿಕೊಡುತ್ತವೆ. ಇಂತಹ ಕ್ರ್ಯಾಶ್ ಕೋರ್ಸ್ ಗಳು ದುಬಾರಿಯಾದರೂ, ಹೆಚ್ಚಿನ ದಿನ ಯಾವುದೊ ಒಂದು ಕೋರ್ಸ್ ಗಾಗಿ ಹೂಡುವುದನ್ನು ತಪ್ಪಿಸುತ್ತದೆ. ಇಂತಹ ಕ್ರ್ಯಾಶ್ ಕೋರ್ಸ್  ಗಳು ಸಾಮಾನ್ಯವಾಗಿ ಕೆಲವೇ ದಿನಗಳ ಕಾಲ ನಡೆಸಲಾಗುತ್ತದೆ.

ಜ್ಞಾನವನ್ನು ಹೆಚ್ಚಿಸಿಕೊಳ್ಳಿ

ಯಾವುದೇ ಕ್ಷೇತ್ರಕ್ಕೆ ಅಗತ್ಯವಿರುವ ಜ್ಞಾನವನ್ನು ಕೇವಲ ಕಾಲೇಜು ಪದವಿ ಇಂದ ಪಡೆಯಬಹುದು ಎನ್ನುವುದು ಸುಳ್ಳು. ಕಲಿಯುವ ಮನಸ್ಸಿದ್ದರೆ, ಯಾವುದೇ ಕ್ಷೇತ್ರದಲ್ಲಿಯಾದರೂ ನಿಪುಣರಾಗಬಹುದು. ಆದರೆ ಅದು ಹೇಗೆ? ನಿಮ್ಮ ಜ್ಞಾನವನ್ನು ಹೆಚ್ಚಿಸಿ ಕೊಳ್ಳಲು, ಹಲವಾರು ಸಂಪನ್ಮೂಲಗಳು ಲಭ್ಯವಿದೆ. ಅವುಗಳನ್ನು ಹತ್ತಿರದ ಗ್ರಂಥಾಲದಲ್ಲಾದರೂ ಓದಬಹುದು ಅಥವಾ ಆನ್ಲೈನ್ ನಲ್ಲಿಯಾದರೂ ಓದಬಹುದು. 

ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲಿ ಸ್ವಯಂ ಕಲಿಕೆ ಕಷ್ಟವಾದರೂ, ನೀವು ಕಲಿತರೆ ಅದು ನಿಮ್ಮ ಛಲ, ಕಲಿಯಬೇಕು ಎನ್ನುವ ಆಸೆ, ಕಲಿಕಾ ಉತ್ಸವವನ್ನು ನಿಮ್ಮ ಸಂಭಾವ್ಯ ಉದ್ಯೋಗದಾತರಿಗೆ ತಿಳಿಸಿಕೊಡುತ್ತದೆ.

ಟ್ರೇಡಿಂಗ್ ಸಿಮ್ಯುಲಾಟೋರ್ ಬಳಸಿ

ಇನ್ವೆಸ್ಟೊಪಿಡಿಯಾ ತರಹದ ಹಲವಾರು ವೆಬ್ಸೈಟ್ ಗಳಲ್ಲಿ ಟ್ರೇಡಿಂಗ್ ಸಿಮ್ಯುಲಾಟೋರ್ ಗಳ ಸೌಲಭ್ಯವಿದೆ. ಅದನ್ನು ಬಳಸಿ ಟ್ರೇಡಿಂಗ್ ಮತ್ತು ಇನ್ನಿತರ ಹಣಕಾಸಿನ ವಿಷಯಗಳ ಬಗ್ಗೆ ತಿಳಿದುಕೊಳ್ಳಿ. ಇದರಿಂದಲೇ ನಿಮ್ಮ ಪೋರ್ಟ್ ಫೋಲಿಯೋ ಸಹ ತಯಾರಿಸಿಕೊಳ್ಳಬಹುದು. ಈ ರೀತಿ ಟ್ರೇಡಿಂಗ್ ಸಿಮ್ಯುಲಾಟೋರ್ ಬಳಸಿ, ಅದರಲ್ಲಿ ನಿಪುಣರಾದರೆ ನಿಮ್ಮ ಉದ್ಯೋಗದಾತರನ್ನು  ಮೆಚ್ಚಿಸುವಲ್ಲಿನ ಯಶಸ್ವಿಯಾಗುತ್ತೀರಿ.

ಫೈನಾನ್ಸಿಯಲ್ ಕ್ಷೇತ್ರದ ಕುರಿತಾಗಿ ಬ್ಲಾಗ್ ಬರೆಯಿರಿ

ನಿಮ್ಮ ಇನ್ವೆಸ್ಟ್ಮೆಂಟ್ ಅಥವಾ ಬಂಡವಾಳದ ಹೂಡಿಕೆ ಕುರಿತಾದ ಆಲೋಚನೆಗಳನ್ನು ಜಗತ್ತಿಗೆ ತಿಳಿಸಲು ಬ್ಲಾಗ್ ಗಳು ಅತ್ಯಂತ ಸಹಾಯಕಾರಿ. ಇದರಿಂದ ನಿಮ್ಮ ಸಂಭಾವ್ಯ ಉದ್ಯೋಗದಾತರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಮೂಡುವಂತೆ ಮಾಡಬಹುದು. ಅದರೊಂದಿಗೆ ಫೈನಾನ್ಸಿಯಲ್ ಬ್ಲಾಗ್ ಸಹಾಯದಿಂದ ನಿಮ್ಮ ಕೌಶಲ್ಯಗಳನ್ನು, ನಿಮ್ಮಸಂವಹನ ಕಲೆಯನ್ನು ಮತ್ತು ತಾಂತ್ರಿಕ ಕೌಶಲ್ಯವನ್ನು ಇಡೀ ಪ್ರಪಂಚಕ್ಕೆ ತಿಳಿಸಿ ಕೊಡಬಹುದು.

ಮಾರ್ಗದರ್ಶಕರೊಂದಿಗೆ ಸಂಪರ್ಕ ಪಡೆದುಕೊಳ್ಳಿ

“ಮುಂದೆ ಗುರಿ, ಹಿಂದೆ ಗುರು ಇದ್ದರೇ, ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು.” ಎನ್ನುವ ಮಾತಿದೆ. ಅಂತೆಯೇ, ಫೈನಾನ್ಸಿಯಲ್ ಸೇಲ್ಸ್ ಕ್ಷೇತ್ರದಲ್ಲಿ ಸಫಲರಾಗಲು, ಒಬ್ಬ ಮಾರ್ಗದರ್ಶಕರೊಂದಿಗೆ ಸಂಯೋಜಿಸಿಕೊಳ್ಳಿ. ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ಮಾರ್ಗದರ್ಶಕರು ನಿಮ್ಮ ವೃತ್ತಿ ಕ್ಷೇತ್ರದ ಯಶಸ್ಸಿಗೆ ಖಂಡಿತವಾಗಿಯೂ ಸಹಾಯ ಮಾಡುತ್ತಾರೆ. ನಿಮ್ಮ ಆಯ್ಕೆ ಮಾಡಿಕೊಳ್ಳುವ ಮಾರ್ಗದರ್ಶಕರು ನಿಮ್ಮ ಕುಟುಂಬದ ಸದಸ್ಯರೇ ಆಗಿರಬಹುದು ಅಥವಾ ನಿಮ್ಮ ಸ್ನೇಹಿತರಾಗಿರಬಹುದು ಅಥವಾ ನಿಮ್ಮ ಹಳೆಯ ಸಂಸ್ಥೆಯ ಸದಸ್ಯರೇ ಆಗಿರಬಹುದು. ಅವರು ಯಾರೇ ಆಗಿರಲಿ ಫೈನಾನ್ಸ್ ಕ್ಷೇತ್ರದ ಬಗ್ಗೆ ಅರಿವು ಮತ್ತು ಜ್ಞಾನ ಇರುವವರನ್ನು ಆಯ್ದುಕೊಳ್ಳಿ.

 ಇಂಟರ್ನ್ ಶಿಪ್ ಪಡೆಯಿರಿ

ಫೈನಾನ್ಸ್ ಕ್ಷೇತ್ರದಲ್ಲಿ ಪೂರ್ಣಾವಧಿಯ ಉದ್ಯೋಗ ಪಡೆಯಬೇಕೆಂದರೆ, ಯಾವುದಾದರೂ ಪ್ರಖ್ಯಾತ ಸಂಸ್ಥೆಯಲ್ಲಿ ಇಂಟರ್ನ್ ಶಿಪ್ ಪಡೆಯಿರಿ. ಫೈನಾನ್ಸ್ ಗೆ ಸಂಬಂಧಿತ ಶಿಕ್ಷಣ ಪಡೆಯದ ಇಂಜಿನಿಯರ್ ಗಳಿಗೆ ವೇತನ ಸಹಿತ ಇಂಟರ್ನ್ ಶಿಪ್ ಗಳು ದೊರಕುವುದು ಕಷ್ಟ. ಹಾಗಾಗಿ ವೇತನ ರಹಿತವಾದರೂ ಸರಿಯೇ ಇಂಟರ್ನ್ ಶಿಪ್ ಗಳನ್ನು ಮಾಡಿಕೊಳ್ಳಿ. 

ಸಾಮಾನ್ಯವಾಗಿ ಫೈನಾನ್ಸ್ ಬ್ಯಾಕ್ ಗ್ರೌಂಡ್ ಅಥವಾ ಫೈನಾನ್ಸ್ ಸಂಬಂಧಿತ ಶಿಕ್ಷಣ ಪಡೆಯದ ಇಂಜಿನಿಯರ್ ಗಳಿಗೆ ಫೈನಾನ್ಸ್ ಕ್ಷೇತ್ರದಲ್ಲಿ ಉದ್ಯೋಗ ದೊರಕುವುದು ಕಷ್ಟವಾದರೂ, ಅಸಾಧ್ಯವೆನೂ ಅಲ್ಲ. ನಿಮ್ಮ ಇಂಜಿನಿಯರಿಂಗ್ ಕೌಶಲ್ಯಗಳನ್ನು ಉಪಯೋಗಿಸಿಕೊಂಡು, ಮೇಲೆ ನೀಡಿರುವ ಟಿಪ್ಪಣಿಗಳನ್ನು ಬಳಸಿಕೊಂಡು ನಿಮ್ಮ ಆಸೆಯಂತೆ ಫೈನಾನ್ಸಿಯಲ್ ಸೇಲ್ಸ್ ಉದ್ಯೋಗದಲ್ಲಿ ಯಶಸ್ಸು ಗಳಿಸಬಹುದು.