ಟೆರಿಟರಿ ಸೇಲ್ಸ್ ಎಕ್ಸೆಕ್ಯುಟಿವ್/ಪ್ರಾದೇಶಿಕ ಮಾರಾಟ ನಿರ್ವಾಹಕ: ವೃತ್ತಿ ವಿವರಣೆ ಮತ್ತು ಸಂದರ್ಶನ ಸಲಹೆಗಳು 

ಸಾಮಾನ್ಯವಾಗಿ ಎಲ್ಲರೂ ಪ್ರಾದೇಶಿಕ ಮಾರಾಟ ನಿರ್ವಹಣೆಯನ್ನು ಪ್ರಮುಖವಾಗಿ ಪರಿಗಣಿಸುವುದಿಲ್ಲ. ಆದರೆ, ಯಾವುದೇ ಸಂಸ್ಥೆಯಲ್ಲಿ ಪ್ರಾಟೆಶಿಕ ಮಾರಾಟ ನಿರ್ವಹಣೆ ಅತೀ ಮುಖ್ಯವಾಗಿದೆ. ಅದು ನಿಮ್ಮ ಸಂಸ್ಥೆಯ ಸರಕು ಅಥವಾ ಸೇವೆಯ ಮಾರಾಟವನ್ನು ಹೆಚ್ಚಿಸಿ, ನಿಮ್ಮ ಮಾರಾಟ ತಂಡದ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಅದರೊಂದಿಗೆ, ವಿಸ್ತಾರವಾದ ಗ್ರಾಹಕರ ನೆಲೆಯನ್ನು ಒದಗಿಸುತ್ತದೆ. ಅಗತ್ಯವಾದ ನಿರ್ವಹಣೆ ಕೈಗೊಳ್ಳುವುದರಿಂದ, ನಿಮ್ಮ ತಂಡದ ಒಗ್ಗಟ್ಟನ್ನು ಪ್ರೇರೇಪಿಸುತ್ತದೆ. ಹಾಗಾದರೆ ಪ್ರಾದೇಶಿಕ ಮಾರಾಟ ನಿರ್ವಹಣೆ ಎಂದರೇನು? ಪ್ರಾದೇಶಿಕ ಮಾರಾಟ ನಿರ್ವಾಹಕರು ಯಾರು? ಅದರ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ನೀಡಿದ್ದೇವೆ.

ಪ್ರಾದೇಶಿಕ ಮಾರಾಟ ನಿರ್ವಹಣೆ  ಎಂದರೇನು?

ಮಾರಾಟ ಅಥವಾ ವ್ಯಾಪಾರ ನಿರ್ವಹಣೆಯಲ್ಲಿ, ಪ್ರಾಂತ್ಯ ಎಂದರೆ ಸಂಸ್ಥೆಯ ಗ್ರಾಹಕರ ಗುಂಪು ಅಥವಾ ಭೌಗೋಲಿಕ ಪ್ರದೇಶ. ಯಾವುದೇ ಸಂಸ್ಥೆಯಲ್ಲಿ ಇಂತಹ ಪ್ರಾಂತ್ಯ ಜವಾಬ್ದಾರಿ ಒಬ್ಬ ಪ್ರಾದೇಶಿಕ ವ್ಯಾಪಾರ ನಿರ್ವಾಹಕ ಅಥವಾ ಸೇಲ್ಸ್ ಮ್ಯಾನ್ ಅಥವಾ ಒಂದು ಮಾರಾಟ ತಂಡದ ಮೇಲೆ ಇರುತ್ತದೆ. ಈ ಪ್ರಾಂತ್ಯಗಳನ್ನು ಸಾಮಾನ್ಯವಾಗಿ ಭೌಗೋಳಿಕತೆ, ಮಾರಾಟ ಸಾಮಾರ್ಥ್ಯ ಅಥವಾ ಈ ಎರಡೂ ಅಂಶಗಳ ಸಂಯೋಜನೆಯ ಆಧಾರದ ಮೇಲೆ ವ್ಯಾಖ್ಯಾನಿಸಲಾಗುತ್ತದೆ. ಈ ರೀತಿಯ ಪ್ರಾಂತ್ಯ ವಿಭಾಗದ ಅಂತಿಮ ಗುರಿ, ಮಾರಾಟ ಮತ್ತು ಲಾಭವನ್ನು ಹೆಚ್ಚಿಸುವುದು. ಅದರೊಂದಿಗೆ, ಸಂಪನ್ಮೂಲಗಳನ್ನು ಸಮರ್ಥವಾಗಿ ನಿಯೋಜಿಸುವುದು. 

ಪ್ರಾದೇಶಿಕ ಮಾರಾಟ ನಿರ್ವಾಹಕ ಎಂದರೇನು? ಅವರ ವೃತ್ತಿ ಜವಾಬ್ದಾರಿಗಳು ಯಾವುವು?

ಪ್ರಾದೇಶಿಕ ಮಾರಾಟ ನಿರ್ವಾಹಕರು ಸಂಸ್ಥೆಯ ನಿಯೋಜಿತ ಪ್ರದೇಶ ಅಥವಾ ಮಾರುಕಟ್ಟೆ ವಿಭಾಗದಲ್ಲಿ ಗರಿಷ್ಟ ಮಾರಾಟ ಮತ್ತು ಲಾಭದಾಯಕತೆಯನ್ನು ಸಾಧಿಸಲು ಕಾರಣವಾಗಿರುತ್ತಾರೆ. ಅದರಲ್ಲಿ ಕಂಪನಿಯ ಉತ್ಪನ್ನಗಳನ್ನು ಮತ್ತು/ಅಥವಾ ಸಂಬಂಧಿತ ಸೇವೆಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡುವುದು, ಬೆಳವಣಿಗೆ ಮತ್ತು ಖಾತೆಯ ವಿಸ್ತಾರಗೊಳಿಸುವುದು ಸಹ ಅವರ ಜವಾಬ್ದಾರಿ.ಪ್ರಾದೇಶಿಕ ಮಾರಾಟ ನಿರ್ವಾಹಕರು ವೈಯಕ್ತಿಕವಾಗಿ ಗ್ರಾಹಕರನ್ನು ಸಂಪರ್ಕಿಸಿ, ಹೊಸ ಖಾತೆಗಳನ್ನು ತೆರೆದು, ಅವುಗಳನ್ನು ಸುರಕ್ಷಿತಗೊಳಿಸುತ್ತಾರೆ.

ಪ್ರಾದೇಶಿಕ ಮಾರಾಟ ನಿರ್ವಾಹಕರ ವೃತ್ತಿ ಜವಾಬ್ದಾರಿಗಳು

 • ನಿಯೋಜಿತ ಪ್ರದೇಶದೊಳಗಿನ ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಗ್ರಾಹಕರಿಗೆ ಸಂಪರ್ಕದ ಕೇಂದ್ರವಾಗಿ ಕಾರ್ಯನಿರ್ವಹಿಸುವುದು.
 • ಸ್ಥಳೀಯ ವ್ಯಾಪಾರ ಅವಕಾಶಗಳು ಮತ್ತು ಸವಾಲುಗಳನ್ನು ಗುರುತಿಸುವುದು. 
 • ಪ್ರಾದೇಶಿಕ ಮಾರಾಟ ಫಲಿತಾಂಶಗಳ ವರದಿಯನ್ನು ಉನ್ನತ ಅಧಿಕಾರಿಗಳಿಗೆ ಸಲ್ಲಿಸುವುದು. (ಸಾಪ್ತಾಹಿಕ, ಮಾಸಿಕ, ತ್ರೈಮಾಸಿಕ ಮತ್ತು ವಾರ್ಷಿಕವಾಗಿ)
 • ನಿರೀಕ್ಷಿತ ಗ್ರಾಹಕರಿಗೆ ನಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರಸ್ತುತಪಡಿಸುವುದು.
 • ಗ್ರಾಹಕರ ಅಗತ್ಯಗಳನ್ನು ಗುರುತಿಸಿ ಮತ್ತು ಉತ್ಪನ್ನ ಪರಿಹಾರಗಳನ್ನು ಶಿಫಾರಸು ಮಾಡುವುದು.
 • ವೈಯಕ್ತಿಕ ಮತ್ತು ತಂಡದ ಮಾರಾಟ ಕೋಟಾಗಳನ್ನು ಪೂರೈಸಲು ಮಾರಾಟಗಾರರು ಮತ್ತು ಇತರ ಆಂತರಿಕ ತಂಡಗಳೊಂದಿಗೆ ನಿಕಟವಾಗಿ ಕೆಲಸ ಮಾಸುವುದು.
 • ವೈಶಿಷ್ಟ್ಯಗಳು, ಬೆಲೆ ಮತ್ತು ಹೆಚ್ಚುವರಿ ಸೇವೆಗಳ ಬಗ್ಗೆ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು.
 • ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಒಗ್ಗೂಡಿಸುವ ಮಾರಾಟ ವಿಧಾನವನ್ನು ಬೆಂಬಲಿಸಲು ವಿವಿಧ ಪ್ರದೇಶಗಳ ಮಾರಾಟ ಪ್ರತಿನಿಧಿಗಳೊಂದಿಗೆ ಸಹಕರಿಸುವುದು.
 • ಸಂಭಾವ್ಯ ಗ್ರಾಹಕರ  ಪಟ್ಟಿಯನ್ನು ಅಭಿವೃದ್ಧಿ  ಪಡಿಸಲು ಮತ್ತು ಅದರ ಕುರಿತಾಗಿ ನಿರ್ಧರಿಸಲು  ಮಾಹಿತಿ ಸಂಶೋದಿಸುವುದು. ವ್ಯಾಪಾರ ಡೈರೆಕ್ಟರಿಗಳನ್ನು ಬಳಸುವ ಮೂಲಕ ಸಂಭಾವ್ಯ ಗ್ರಾಹಕರನ್ನು ಗುರುತಿಸುವುದು, ಅಸ್ಥಿತ್ವದಲ್ಲಿರುವ ಗ್ರಾಹಕರು ನೀಡುವ ಲೀಡ್ ಗಳನ್ನು ಅನುಸರಿಸುವುದು ಮತ್ತು ವ್ಯಾಪಾರ ಪ್ರದರ್ಶನಗಳಲ್ಲಿ ಮತ್ತು ಸಮ್ಮೇಳನಗಳಲ್ಲಿ ಹಾಜರಾಗುವ ಮೂಲಕ ನಿರೀಕ್ಷಿತ ಗ್ರಾಹಕರನ್ನು ಗುರುತಿಸುವುದು ಪ್ರಾದೇಶಿಕ  ಮಾರಾಟ ನಿರ್ವಾಹಕರ ಜವಾಬ್ದಾರಿ.
 • ಹೊಸ ಮತ್ತು ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಸಂಪರ್ಕಿಸಿ ಅವರ ಅಗತ್ಯಗಳನ್ನು ಚರ್ಚಿಸಿ ಮತ್ತು ನಿರ್ದಿಷ್ಟ ಉತ್ಪನ್ನಗಳು ಮತ್ತು ಸೇವೆಗಳು ಈ ಅಗತ್ಯಗಳನ್ನು ಹೇಗೆ ಪೂರೈಸುತ್ತವೆ ಎಂಬುದನ್ನು ವಿವರಿಸುವುದು.
 • ಗ್ರಾಹಕರ ಅಗತ್ಯತೆಗಳು, ಉತ್ಪನ್ನದ ವಿಶೇಷಣಗಳು ಮತ್ತು ನಿಯಮಗಳನ್ನು ಪೂರೈಸಲು ಉತ್ಪನ್ನಗಳನ್ನು ಆಯ್ಕೆ ಮಾಡಲು ಗ್ರಾಹಕರಿಗೆ ಸಹಾಯ ಮಾಡುವುದು.
 • ಗ್ರಾಹಕರ ಅಗತ್ಯತೆಗಳನ್ನು ಪೂರೈಸುವ ಉತ್ಪನ್ನ ವೈಶಿಷ್ಟ್ಯಗಳಿಗೆ ಒತ್ತು ನೀಡಿ ಮತ್ತು ಉತ್ಪನ್ನ ಸಾಮರ್ಥ್ಯಗಳು ಮತ್ತು ಮಿತಿಗಳನ್ನು ಪ್ರದರ್ಶಿಸುವುದು.
 • ಬೆಲೆಗಳು, ಲಭ್ಯತೆ ಮತ್ತು ಉತ್ಪನ್ನ ಬಳಕೆಗಳ ಬಗ್ಗೆ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸುವುದು.
 • ಬೆಲೆಗಳು ಮತ್ತು ಮಾರಾಟದ ನಿಯಮಗಳು ಮತ್ತು ಸೇವಾ ಒಪ್ಪಂದಗಳ ಬಗ್ಗೆ ಚರ್ಚೆ ನಡೆಸುವುದು.
 • ಮಾರಾಟ ಒಪ್ಪಂದಗಳನ್ನು ತಯಾರಿಸಿ ಮತ್ತು ಪ್ರಕ್ರಿಯೆಗಾಗಿ ಆದೇಶಗಳನ್ನು ಸಲ್ಲಿಸುವುದು.
 • ಮಾರಾಟ ತಂತ್ರಗಳು ಮತ್ತು ಮಾರ್ಕೆಟಿಂಗ್ ಮಾಹಿತಿಯಂತಹ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಸಹೋದ್ಯೋಗಿಗಳೊಂದಿಗೆ ಸಹಕರಿಸುವುದು. 
 • ಗ್ರಾಹಕರು ತಮ್ಮ ಖರೀದಿಯಲ್ಲಿ ತೃಪ್ತರಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಯಾವುದೇ ಪ್ರಶ್ನೆಗಳು ಅಥವಾ ಕಾಳಜಿಗಳಿಗೆ ಉತ್ತರಿಸಲು ಅವರೊಂದಿಗೆ ಚರ್ಚಿಸುವುದು.
 • ಪ್ರಸ್ತುತ ಮತ್ತು ಸಂಭಾವ್ಯ ಗ್ರಾಹಕರಿಗೆ ಕರೆಗಳನ್ನು ಮಾಡುವುದು, ವೈಯಕ್ತಿಕ ಭೇಟಿಗಳನ್ನು ನೀಡುವುದು ಮತ್ತು ಅಗತ್ಯವಿದ್ದಲ್ಲಿ, ಪ್ರಸ್ತುತಿಗಳನ್ನು (ಪ್ರೆಸೆಂಟೇಷನ್) ನೀಡುವುದು.
 • ಗ್ರಾಹಕರ ಸಮಸ್ಯೆಗಳು ಮತ್ತು ದೂರುಗಳನ್ನು ತ್ವರಿತವಾಗಿ ನಿವಾರಿಸುವುದು
 • ಸಂಸ್ಥೆಯ ಅಥವಾ ಕಂಪನಿಯ ಮಾರಾಟ, ಮಾರಾಟ ನಿರ್ವಹಣೆ,  ಲೆಕ್ಕಪತ್ರ ನಿರ್ವಹಣೆ, ಲಾಜಿಸ್ಟಿಕ್ಸ್ ಮತ್ತು ತಾಂತ್ರಿಕ ಸೇವಾ ತಂಡಗಳೊಂದಿಗೆ ಮಾರಾಟ ಪ್ರಯತ್ನವನ್ನು ಸಂಯೋಜಿಸುವುದು.
 • ಪ್ರಾದೇಶಿಕ ಮಾರುಕಟ್ಟೆಯನ್ನು ಮತ್ತು ಅದರ ಸಾಮರ್ಥ್ಯವನ್ನು ವಿಶ್ಲೇಷಿಸಿ, ಮತ್ತು ಅಸ್ತಿತ್ವದಲ್ಲಿರುವ ಮತ್ತು  ಸಂಭಾವ್ಯ ಗ್ರಾಹಕರ ಮೌಲ್ಯವನ್ನು ನಿರ್ಧರಿಸುವುದು.
 • ಪ್ರಸ್ತುತ ಗ್ರಾಹಕರ  ಪ್ರೊಫೈಲ್ ಗಳನ್ನು ರಚಿಸಿ, ಅವರ ಶೇರ್ ಮತ್ತು  ಮೌಲ್ಯ ಕ್ಕೆ ಸಂಬಂಧಿಸಿದ ಅವಕಾಶಗಳನ್ನು ಹೈಲೈಟ್ ಮಾಡುವುದು
 • ಸಂಸ್ಥೆಯ ಲಾಭಗಳನ್ನು  ಗುರಿತಿಸಿ, ಸಂಸ್ಥೆಯ ಉತ್ಪನ್ನಗಳನ್ನು ಮತ್ತು  ಸೇವೆಗಳನ್ನು ಬೇರೆ ಕಂಪನಿಗಳಿಗೆ ಹೋಲಿಸಿ, ಸುಧಾರಿಸಲು ವಿವಿಧ  ಬಗೆಗಳನ್ನು ಗುರುತಿಸುವುದು.
 • ಕಂಪನಿಯ ಮತ್ತು ತಮ್ಮ ಪ್ರಾದೇಶಿಕ ಲಾಭವನ್ನು  ಹೆಚ್ಚಿಸಲು ವೈಯಕ್ತಿಕ ಮಾರಾಟ ತಂತ್ರವನ್ನು ಆಯೋಜಿಸುವುದು
 • ಗ್ರಾಹಕರ ಅಗತ್ಯತೆಗಳು, ಸಮಸ್ಯೆಗಳು, ಆಸಕ್ತಿಗಳ ಕುರಿತಾಗಿ ಮೌಖಿಕ  ಮತ್ತು ಲಿಖಿತ ವರದಿಗಳೊಂದಿಗೆ ಪೂರೈಕೆ ನಿರ್ವಹಣೆ ಅಥವಾ ಸಪ್ಲೈ ಮ್ಯಾನೇಜ್ಮೆಂಟ್ ನಿರ್ವಹಿಸುವುದು
 • ಅಗತ್ಯ ಮತ್ತು ಸಂಬಂಧಿತ ಸಾಹಿತ್ಯವನ್ನು ಓದುವ ಮೂಲಕ, ಮಾರಾಟ ಮತ್ತು ತಾಂತ್ರಿಕ ಸೇವೆಗಳ ಪ್ರದೇಶವನ್ನು ಸಮಾಲೋಚಿಸುವ ಮೂಲಕ ಉತ್ಪನ್ನಗಳ ಅಪ್ಲಿಕೇಶನ್, ತಾಂತ್ರಿಕ ಸೇವೆಗಳು, ಮಾರುಕಟ್ಟೆಯ ಪರಿಸ್ಥಿತಿಗಳು, ಸ್ಪರ್ಧಾತ್ಮಕ ಚಟುವಟಿಕೆಗಳು, ಜಾಹಿರಾತು ಮತ್ತು  ಪ್ರಚಾರದ ಪ್ರವೃತ್ತಿಗಳನ್ನು ಗಮನದಲ್ಲಿರಿಸಿಕೊಂಡು, ಪ್ರಾದೇಶಿಕ ಮಾರುಕಟ್ಟೆಯನ್ನು ಸುಧಾರಿಸಲು ಸೂಕ್ತ ಮಾರ್ಗವನ್ನು ಹುಡುಕುವುದು
 • ಮಾರುಕಟ್ಟೆಯಲ್ಲಿರುವ ಮತ್ತು  ಕಂಪನಿಯ ಹೊಸ ಉತ್ಪನ್ನಗಳ ಬಗ್ಗೆ  ನಿರಂತರವಾಗಿ ಕಲಿಯಿರಿ ಮತ್ತು ಮಾರಾಟ  ಕೌಶಲ್ಯಗಳನ್ನು ಸುಧಾರಿಸಿಕೊಳ್ಳುವುದು
 • ಮೇಲೆ ನೀಡಿರುವ ಎಲ್ಲಾ ವೃತ್ತಿ ಜವಾಬ್ದಾರಿಗಳೊಂದಿಗೆ, ಮೇಲ್ವಿಚಾರಕರು ನಿಯೋಜಿಸುವ  ಇತರ ಕರ್ತವ್ಯಗಳನ್ನು ನಿಯೋಜಿಸುವುದು 

ಪ್ರಾದೇಶಿಕ ಮಾರಾಟ ನಿರ್ವಾಹಕ ಅರ್ಹತೆ ಮತ್ತು ಅವಶ್ಯಕತೆಗಳು

 • ಮಾರಾಟ ಪ್ರತಿನಿಧಿಯಾಗಿ ಉದ್ಯೋಗದ ಅನುಭವ
 • ಕಂಪನಿಗೆ ಸಂಬಂಧಿತ ವ್ಯಾಪಾರ ಉದ್ಯಮದ ಅನುಭವ
 • ಸಿ ಆರ್ ಎಂ ಸಾಫ್ಟ್ವೇರ್ ಅನುಭವ
 • ಅತ್ಯುತ್ತಮ ಸಂವಹನ  ಕೌಶಲ್ಯಗಳನ್ನು ಹೊಂದಿರುವುದು ಅತ್ಯಗತ್ಯ. ಗ್ರಾಹಕರ ಮನವೊಲಿಸುವ ಲಿಖಿತ ಮತ್ತು ಮೌಖಿಕ ಸಂವಹನ  ಕೌಶಲ್ಯಗಳನ್ನು ಹೊಂದಿರಬೇಕು. ಅದರೊಂದಿಗೆ, ಗ್ರಾಹಕರನ್ನು ಆಲಿಸುವ, ಅವರಿಗೆ ಕಸ್ಟಮರ್ ಸರ್ವಿಸ್ ನೀಡಲು ಅಗತ್ಯವಿರುವ ಸಂವಹನಾ ಕಲೆಯನ್ನು ಪ್ರಾದೇಶಿಕ ಮಾರಾಟ ನಿರ್ವಾಹಕರು ಹೊಂದಿರಬೇಕು.
 • ಸೇಲ್ಸ್ ಉದ್ಯೋಗ ಅಥವಾ ಮಾರಾಟ ಉದ್ಯೋಗದಲ್ಲಿ ಸಾಬೀತು ಪಡಿಸಿರುವ ದಾಖಲೆಯೊಂದಿಗೆ ಸ್ಥಿತಿಸ್ಥಾಪಕತ್ವ ಪಡೆದಿರಬೇಕು
 • ನಿರ್ಧಾರ ತೆಗೆದುಕೊಳ್ಳುವುದು, ಸಮಸ್ಯೆ ನಿವಾರಣೆ ಮತ್ತು ಒಳ್ಳೆಯದನ್ನು ಹೊಂದುವಂತಹ ಬಲವಾದ ಗುಣಲಕ್ಷಣಗಳನ್ನು ಹೊಂದಿರಬೇಕು
 • ಪರಿಸರದ ಬಗೆ (ಶಾಂತ ಅಥವಾ ವೇಗದ ಗತಿ) ಅಥವಾ  ಗ್ರಾಹಕರ ಬಗೆ ಪರಿಗಣಿಸದೆ, ಶಾಂತ ಮತ್ತು ವೃತ್ತಿಪರತೆಯಿಂದ ವರ್ತಿಸುವ ಸಾಮಾರ್ಥ್ಯವನ್ನು ಹೊಂದಿರಬೇಕು.
 • ವಿವರಗಳಿಗೆ ಹೆಚ್ಚಿನ ಪರಿಗಣನೆಯನ್ನು ಹೊಂದಿರವಬೇಕು ಮತ್ತು ಉನ್ನತ ಮಟ್ಟದ  ನಿಖರತೆಯೊಂದಿಗೆ ಅಸಾಧಾರಣ ಸಾಂಸ್ಥಿಕ ಕೌಶಲ್ಯಗಳನ್ನು ಹೊಂದಿರಬೇಕು.
 •  ಪ್ರಾದೇಶಿಕ ಮಾರಾಟ ನಿರ್ವಾಹಕರು ಸ್ವಯಂ ಪ್ರೇರಿತರಾಗಿರಬೇಕು.
 • ಸೇಲ್ಸ್ಫೋರ್ಸ್ ಅಥವಾ ಸೇಲ್ಸ್ ತಂಡದೊಂದಿಗೆ ಅನುಭವ
 • ಉದ್ಯಮದ ಬಗ್ಗೆ ಬಲವಾದ ಜ್ಞಾನ
 • ಸಮಯ ನಿರ್ವಹಣೆಯಲ್ಲಿ ಪ್ರಾವೀಣ್ಯತೆ ಮತ್ತು ಸೀಮಿತ ಗಡವಿನೊಂದಿಗೆ ಕೆಲಸ ಮಾಡುವ ಸಾಮರ್ಥ್ಯ
 • ಸ್ವತಂತ್ರವಾಗಿ ಮತ್ತು  ತಂಡದೊಂದಿಗೆ ಕೆಲಸ ಮಾಡುವ ಸಾಮಾರ್ಥ್ಯ
 • ವಿಶ್ವಾಸಾರ್ಹರು, ಪ್ರಾಮಾಣಿಕರು, ಗೌರವಾನ್ವಿತ ಮತ್ತು ಹೊಂದಿಕೊಳ್ಳುವ ಸಾಮರ್ಥ್ಯವುಳ್ಳವರು
 • ಪ್ರಾದೇಶಿಕ  ಮಾರಾಟ ನಿರ್ವಾಹಕರು ಗೌಪ್ಯ ಮಾಹಿತಿಯನ್ನು ನಿರ್ವಹಿಸಲು ಸಮರ್ಥರಾಗಿರಬೇಕು.
 • ಕಂಪನಿಯ ವಿವಿಧ ಉಪಕರಣಗಳು, ಕಂಪ್ಯೂಟರ್ ಮತ್ತು ಇತರ ಉಪಕರಣಗಳನ್ನು ನಿರ್ವಹಿಸಲು ಪ್ರಾವೀಣ್ಯತೆಯನ್ನು ಹೊಂದಿರಬೇಕು. 

ಪ್ರಾದೇಶಿಕ ಮಾರಾಟ ನಿರ್ವಾಹಕರಾಗುವುದು ಹೇಗೆ? 

ಪ್ರಾದೇಶಿಕ ಮಾರಾಟ ನಿರ್ವಾಹಕರಾಗಲು ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಅದರೊಂದಿಗೆ ಮಾರಾಟ  ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿರಬೇಕು.

ಶಿಕ್ಷಣ:

ಕೆಲವರು ಸ್ನಾತಕೋತ್ತರ ಪದವಿಯನ್ನು ಹೊಂದಿದ್ದರೂ ಹೆಚ್ಚಿನ ಮಾರಾಟ ವ್ಯವಸ್ಥಾಪಕರು ಕೇವಲ ಪದವಿಯನ್ನು ಹೊಂದಿರುತ್ತಾರೆ. ಗಮನಾರ್ಹ ಕೆಲಸದ ಅನುಭವ ಹೊಂದಿರುವ ಉದ್ಯೋಗ ಅಭ್ಯರ್ಥಿಗಳಿಗೆ ಶೈಕ್ಷಣಿಕ ಅವಶ್ಯಕತೆಗಳು ಕಡಿಮೆ ಕಟ್ಟುನಿಟ್ಟಾಗಿರುತ್ತವೆ. ವ್ಯವಹಾರ ಕಾನೂನು ನಿರ್ವಹಣೆ, ಅರ್ಥಶಾಸ್ತ್ರ, ಲೆಕ್ಕಪತ್ರ ನಿರ್ವಹಣೆ, ಹಣಕಾಸು, ಗಣಿತ, ಮಾರ್ಕೆಟಿಂಗ್ ಮತ್ತು ಅಂಕಿಅಂಶಗಳ  ಕೋರ್ಸ್ಗಳನ್ನು ಮಾಡಿರುವ ಅಭ್ಯರ್ಥಿಗಳಿಗೆ ಆದ್ಯತೆ ಹೆಚ್ಚು.

ಸಂಬಂಧಿತ ಉದ್ಯೋಗದಲ್ಲಿ ಕೆಲಸದ ಅನುಭವ:

ಪ್ರಾದೇಶಿಕ ಮಾರಾಟ ನಿರ್ವಾಹಕರಾಗಲು ಕೆಲಸದ ಅನುಭವ ಸಾಮಾನ್ಯವಾಗಿ ಅಗತ್ಯವಿರುತ್ತದೆ.  ಆದರೆ ಅಗತ್ಯವಿರುವ ಅನುಭವದ ಅವಧಿ ಬದಲಾಗಬಹುದು. ಸಾಮಾನ್ಯವಾಗಿ, ಪ್ರಾದೇಶಿಕ ಮಾರಾಟ ನಿರ್ವಾಹಕರಾಗಲು ಕನಿಷ್ಠ ಒಂದರಿಂದ ಐದು ವರ್ಷಗಳ ಅನುಭವವನ್ನು ಈ ವೃತ್ತಿ ಬಯಸುತ್ತದೆ.

ಪ್ರಮುಖ ಗುಣಗಳು:

ವಿಶ್ಲೇಷಣಾ  ಕೌಶಲ್ಯಗಳು, ಸಂವಹನ ಕಲೆ, ಗ್ರಾಹಕ ಸೇವಾ ಕೌಶಲ್ಯಗಳು ಮತ್ತು ನಾಯಕತ್ವದ ಕೌಶಲ್ಯಗಳು

ಭಾರತದಲ್ಲಿ ಸರಾಸರಿ ಪ್ರಾದೇಶಿಕ ಮಾರಾಟ ನಿರ್ವಾಹಕರ ಸಂಬಳ 505,446 ರೂ/ವರ್ಷ.

ಪ್ರಾದೇಶಿಕ ಮಾರಾಟ ನಿರ್ವಾಹಕರ ಸಂದರ್ಶನ ಪ್ರಶ್ನೆಗಳು ಮತ್ತು ಸಂದರ್ಶನದ ಪ್ರಶ್ನೆಗಳು

ನೀವು ಪ್ರಾದೇಶಿಕ ಮಾರಾಟ ನಿರ್ವಾಹಕರಾಗಲು ನೀವು ಸಂದರ್ಶನದಲ್ಲಿ ಹಾಜರಾಗಿ, ಅದರಲ್ಲಿ ಉತ್ತೀರ್ಣರಾಗುವುದು ಅತ್ಯಗತ್ಯ. ಸಂದರ್ಶನದಲ್ಲಿ  ನಿಮಗೆ ಕೇಳಬಹುದಾದ ಕೆಲವು ಪ್ರಶ್ನೆಗಳು ಇಲ್ಲಿವೆ. 

 • ಪ್ರಾದೇಶಿಕ ಮಾರಾಟ ನಿರ್ವಾಹಕರಾಗಿ, ನಿಮ್ಮ ನಿರ್ವಹಣಾ ಶೈಲಿ ಯಾವುದು?

ಇಂತಹ ಪ್ರಶ್ನೆಗಳಿಗೆ ಯಾವುದೇ ಬಗೆಯ ನಿರ್ದಿಷ್ಟ ಶೈಲಿಯ ಹೆಸರನ್ನು ಹೇಳದೇ ಇರುವುದು ಒಳಿತು. ಏಕೆಂದರೆ ಪ್ರತಿ ಶೈಲಿಗೂ ಹಲವಾರು ಅರ್ಥಗಳು ಮತ್ತು ವಿವರಣೆಗಳಿವೆ. ಎಲ್ಲಾ ಶೈಲಿಗಳಿಗಿಂತ ಸುರಕ್ಷಿತ ಶೈಲಿ ಎಂದರೆ ಸಾಂದರ್ಭಿಕ ಶೈಲಿ. ಏಕೆಂದರೆ ಈ ಶೈಲಿ ಪರಿಸ್ಥಿತಿಗೆ ಅನುಗುಣವಾಗಿ ನಿರ್ವಹಿಸುವುದಾಗಿ ತಿಳಿಸಿಕೊಡುತ್ತದೆ.

 • ಪ್ರಾದೇಶಿಕ ಮಾರಾಟ ನಿರ್ವಾಹಕ ಸ್ಥಾನಕ್ಕೆ, ಅಗತ್ಯವಿರುವ ನಿರ್ಧಿಷ್ಟವಾದ ಯಾವ ಅನುಭವ ನಿಮಗಿದೆ?

ಈ ಪ್ರಶ್ನೆಗೆ ಉತ್ತರಿಸುವಾಗ ನೀವು ಅರ್ಜಿ ಸಲ್ಲಿಸಿರುವ ಸ್ಥಾನಕ್ಕೆ ಸಂಬಂಧಿಸಿದ ನಿಶ್ಚಿತ ವಿಷಯಗಳನ್ನು ಪರಿಗಣಿಸಿ. ನೀವು ಅರ್ಜಿ ಸಲ್ಲಿಸುತ್ತಿರುವ ಉದ್ಯೋಗದಲ್ಲಿ ನಿಮಗೆ ಹೆಚ್ಚಿನ ಅನುಭವವಿಲ್ಲ ಎಂದು ನಿಮಗೆ ಮೊದಲೇ ತಿಳಿದಿದ್ದರೆ, ಈ ಪ್ರಶ್ನೆಗೆ ಮುಂಚಿತವಾಗಿ ಯೋಚಿಸಿ ಮತ್ತು ನೀವು ಏನು ಮಾಡಿದ್ದೀರಿ ಎಂಬುದರ ಆಧಾರದ ಮೇಲೆ ಕೆಲವು ಸಾಪೇಕ್ಷ ಉದಾಹರಣೆಗಳನ್ನು ಒದಗಿಸಲು ತಯಾರಿರಿ. 

 • ಕಳೆದ ಹನ್ನೆರಡು ತಿಂಗಳುಗಳಲ್ಲಿ ಪ್ರಾದೇಶಿಕ ಮಾರಾಟ ನಿರ್ವಾಹಕ ಸ್ಥಾನಕ್ಕೆ ಅಗತ್ಯವಿರುವ ಜ್ಞಾನವನ್ನು ಹೆಚ್ಚಿಸಲು ನೀವು ಏನು ಮಾಡಿದ್ದೀರಿ?

ನಿಮ್ಮ ಸಂಭಾವ್ಯ ಉದ್ಯೋಗದಾತರಿಗೆ ಆಸಕ್ತಿಯನ್ನುಂಟು ಮಾಡುವ ವೈಯಕ್ತಿಕ ಮತ್ತು ವೃತ್ತಿ ಕ್ಷೇತ್ರದಲ್ಲಿ ನೀವು ನಿರ್ವಹಿಸಿರುವ ಹಲವಾರು ಬಗೆಯ ವಿಷಯಗಳನ್ನು ಪ್ರದರ್ಶಿಸಲು ಇದು ಒಳ್ಳೆಯ ಅವಕಾಶ. ನೀವು ಉತ್ತರಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯವೆಂದರೆ ನಿಮ್ಮ ಉದ್ಯೋಗದಾತರು ಹುಡುಕುವ ಅಭ್ಯರ್ಥಿ ಸ್ವಯಂ ಪ್ರೇರಿತ ಮತ್ತು ಗುರಿ ಆಧಾರಿತರಾದವರು. ಹಾಗಾಗಿ ನಿಮ್ಮ ಉತ್ತರ ನೀವು ಸ್ವಾವಲಂಬಿ ಮತ್ತು ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ ಎನ್ನುವುದನ್ನು ಪ್ರತಿಬಿಂಬಿಸಬೇಕು. 

 • ನಮಗೆ ಸಾವಿರಾರು ಅಭ್ಯರ್ಥಿಗಳಿಂದ ಅರ್ಜಿ ಬಂದಿದೆ. ಅವರೆಲ್ಲರನ್ನೂ ತೊರೆದು ನಿಮ್ಮನ್ನು ನಾವು ಏಕೆ ಆಯ್ಕೆ ಮಾಡಬೇಕು?

ಈ ಪ್ರಶ್ನೆಗೆ ಉತ್ತರಿಸುವಾಗ ನಿಮ್ಮ ಸಹ ಅಭ್ಯರ್ಥಿಗಳನ್ನು ಕೀಳಾಗಿ ಕಾಣಬೇಡಿ. ಆದರೆ ನಿಮ್ಮ ಸಂದರ್ಶಕರು ನಿಮ್ಮನ್ನು ಆಯ್ಕೆ ಏಕೆ ಮಾಡಬೇಕು ಎನ್ನುವುದಕ್ಕೆ ಸೂಕ್ತ ಕಾರಣವನ್ನು ನೀಡಿ. ನಿಮ್ಮ ಸಾಮರ್ಥ್ಯದ ಮೇಲೆ ನಿಮ್ಮ ಉತ್ತರವನ್ನು ಕೇಂದ್ರೀಕರಿಸಿ. ನೀವೇ ಈ  ಉದ್ಯೋಗಕ್ಕೆ ಸೂಕ್ತವಾದವರು ಎನ್ನುವುದನ್ನು ನಿಮ್ಮ ವ್ಯಕ್ತಿತ್ವದ ಮೂಲಕ ವಿವರಿಸಿ.ನಿಮ್ಮ ಒಂದು ಬಲವಾದ ಸಾಮರ್ಥ್ಯದ ಬಗ್ಗೆ ಮಾತನಾಡಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ನಿಮ್ಮ ಯಾವ ಗುಣ ನಿಮ್ಮನ್ನು ಒಳ್ಳೆಯ ಉದ್ಯೋಗಿಯಾಗಿ ಮಾಡುತ್ತದೆ ಎನ್ನುವುದನ್ನು ವಿಶ್ಲೇಷಿಸಿ, ನೀವು ಕಂಪನಿಗೆ ಏನುಕೊಡುಗೆ ನೀಡುತ್ತೀರಿ ಮತ್ತು ನಿಮ್ಮಿಂದ ಕಂಪನಿ ಲಾಭ ಹೇಗೆ ಉಂಟಾಗುತ್ತದೆ ಎನ್ನುವುದನ್ನು ವಿವರಿಸಿ.

 • ನೀವು ನಿಮ್ಮ ಹಿಂದಿನ ಉದ್ಯೋಗವನ್ನು ಏಕೆ ತೊರೆಯುತ್ತಿದ್ದೀರಿ?

ನೀವು ಈಗಾಗಾಲೇ ಯಾವುದೊ ಉದ್ಯೋಗದಲ್ಲಿದ್ದರೆ, ನಿಮ್ಮ ಉತ್ತರ ನಿಮ್ಮ ವೃತ್ತಿ ಜೀವನದ ಅಭಿವೃದ್ಧಿಯನ್ನು ಹೆಚ್ಚಿಸುವ ಮತ್ತು ಹೊಸ ಸವಾಲುಗಳನ್ನು ಎದುರಿಸುವ ಇಚ್ಛೆಯನ್ನು ಹೊಂದಿರುವುದಾಗ ಅಥವಾ ಈ ರೀತಿಯ ಉತ್ತರವನ್ನು ಕೇಂದ್ರೀಕರಿಸಲಿ. ಆದರೆ ನಿಮ್ಮ ಉತ್ತರ ಸಂಕ್ಷಿಪ್ತವಾಗಿ, ಪ್ರಾಮಾಣಿಕವಾಗಿರಲಿ. ನಿಮ್ಮ ಹಿಂದಿನ ಉದ್ಯೋಗದಾತರ ಬಗ್ಗೆ ಯಾವುದೇ ಬಗೆಯ ನಕಾರಾತ್ಮಕತೆ ನಿಮ್ಮ ಉತ್ತರದಲ್ಲಿ ಕಾಣದೇ ಇರಲಿ.

 • ಮುಂದಿನ ಐದು ವರ್ಷಗಳಲ್ಲಿ ನೀವು ಏನನ್ನು ಮಾಡುತ್ತೀರಿ ಎಂದು ನೀವು ಭಾವಿಸುತ್ತೀರಿ?

ಸಂದರ್ಶನದ ಈ ಪ್ರಶ್ನೆಗೆ ನಿಮ್ಮ ಉದ್ಯೋಗ ಬದ್ಧತೆಯೇ ಉತ್ತರ. ಈ ಪ್ರಶ್ನೆಯ ಮೂಲಕ ನಿಮ್ಮ ಸಂದರ್ಶಕರು ತಿಳಿಸುಕೊಳ್ಳಲು ಬಯಸುತ್ತಿರುವುದು ಏನೆಂದರೆ: ನೀವು ಗುರಿಗಳನ್ನು ನಿಗದಿಪಡಿಸುವವರೇ? ದುರಾಲೋಚನೆ ಹೊಂದಿರುವವರೇ?  ನೀವು ವಿಶ್ವಾಸಾರ್ಹರೆ? ನೀವು ಕಾರ್ಯಬದ್ಧತೆಯನ್ನು ಹೊಂದಿರುವವರೇ? ನೀವು ನಿಷ್ಠಾವಂತರೇ? ನಿಮ್ಮ ಸಂದರ್ಶಕರ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವಂತಹ ಒಂದು ಸಕಾರಾತ್ಮಕ ಉತ್ತರವನ್ನು ತಯಾರಿಸಿಕೊಳ್ಳಿ. ನಿಮ್ಮ ಉತ್ತರದಲ್ಲಿ ನಿಮ್ಮ ವೃತ್ತಿ ಆಯ್ಕೆ, ಮತ್ತು ನೀವು ಕಂಪನಿಗೆ ಹೇಗೆ ಉಪಯುಕ್ತರು ಎನ್ನುವುದನ್ನು ತಿಳಿಸಿ. ಇವೆಲ್ಲವುಗಳನ್ನು ಉತ್ತರಿಸುವಾಗ ಸ್ವಯಂ ಅರಿವು ಇರಲಿ.

ಪ್ರಾದೇಶಿಕ ಮಾರಾಟ  ನಿರ್ವಾಹಕರಾಗಲು ಮೇಲೆ ನೀಡಿರುವ ಸಂದರ್ಶನ ಸಲಹೆಗಳನ್ನು ಉಪಯೋಗಿಸಿಕೊಳ್ಳಿ. ಇನ್ನೂ ಹೆಚ್ಚಿನ ಸಲಹೆಗಳಿಗೆ ಯಶಸ್ವಿ ಇಂಟರ್ವೀವಗಾಗಿ ಅತ್ಯುತ್ತಮ ಸಲಹೆಗಳು ಲೇಖನವನ್ನು ಓದಿ. ಪ್ರಾದೇಶಿಕ ಮಾರಾಟ ನಿರ್ವಾಹಕರಾಗಲು ಮಿಂಟ್ಲಿ ನಿಮಗೆ ಹೇಗೆ ಸಹಾಯ ಮಾಡಿತು ಎನ್ನುವುದನ್ನು ಕಾಮೆಂಟ್ಸ್ ನಲ್ಲಿ ಹೇಳಿ.