ಯಾವ ಉದ್ಯೋಗ ನಿಮ್ಮ ವ್ಯಕ್ತಿತ್ವ ಮತ್ತು ಕೌಶಲ್ಯಗಳಿಗೆ ಹೊಂದುತ್ತದೆ?

ನೀವು ಉದ್ಯೋಗ ಹುಡುಕುತ್ತಿದ್ದೀರಿ. ವಿವಿಧ  ಸಂಸ್ಥೆಗಳಿಗೆ ನಿಮ್ಮ ರೆಸ್ಯುಮೆ ಯೊಂದಿಗೆ ಅರ್ಜಿ ಸಲ್ಲಿಸಿದ್ದೀರಿ. ನಿಮ್ಮ ರೆಸ್ಯುಮೆ ಪ್ರಥಮ ಹಂತದ ಪರಿಷ್ಕರಣೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣಗೊಂಡಿದೆ! ಕಂಪನಿಗಳಿಂದ ನಿಮ್ಮಸಂದರ್ಶನಕ್ಕೆ ಕರೆ ಬರುತ್ತಿದೆ. ಸಂದರ್ಶನದ ನಂತರ, ನೀವು ಸಂದರ್ಶನದಲ್ಲಿ ಸಹ ಉತ್ತೀರ್ಣರಾಗಿದ್ದೀರಿ ಎನ್ನುವ ಇಮೇಲ್  ಬರುತ್ತದೆ. ಈಗ ನಿಮ್ಮ ಬಳಿ ಉದ್ಯೋಗ ಪ್ರಸ್ತಾಪ ಇದೆ. ಅಭಿನಂದನೆಗಳು! ಈಗ, ನೀವು ಅದನ್ನು ಸ್ವೀಕರಿಸಬೇಕೇ? ಅಥವಾ ನಿರಾಕರಿಸಬೇಕೇ? – ಎಂದು ನಿರ್ಧರಿಸುವ ಸಮಯ. 

ಸಾಂದರ್ಭಿಕವಾಗಿ ಹೇಳುವುದಾದರೆ, ಈ ಉದ್ಯೋಗ  ಅವಕಾಶವೂ ತುಂಬಾ ಒಳ್ಳೆಯದು ಅನ್ನಿಸುತ್ತದೆ. ಈ ಕಂಪನಿಯಲ್ಲಿ ಆಯ್ಕೆಯಾಗಿರುವುದು ನಿಮಗೆ ಸಂತೋಸಹ ನೀಡಿರುತ್ತದೆ. ಆದರೆ ನೀವು ಯಾವುದೇ  ಬಗೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು, ಈ ಉದ್ಯೋಗ ಸ್ಥಾನದ ಪ್ರಯೋಜನಗಳನ್ನು ಮತ್ತು ನ್ಯೂನತೆಗಳನ್ನು ಅಳೆದು ನೋಡುವುದು ಅತ್ಯಗತ್ಯ. ಮತ್ತು ನಿಮ್ಮ ಬಳಿ ಎರಡು ಅಥವಾ  ಹೆಚ್ಚಿನ ವಿವಿಧ ಬಗೆಯ ಕಂಪನಿಗಳಿಂದ ಉದ್ಯೋಗ ಪ್ರಸ್ತಾಪವಿದ್ದರೆ, ನಿಮಗೆ ತಿಳಿದಿರಲಿ, ಯಾವುದೇ ಎರಡು ಕಂಪನಿಗಳು ಮತ್ತು ಅಲ್ಲಿರುವ ಉದ್ಯೋಗಗಳು ಸಮಾನವಾಗಿರುವುದಿಲ್ಲ, ಹಾಗಾಗಿ, ಯಾವುದೇ  ಬಗೆಯ ಉದ್ಯೋಗವನ್ನು ಒಪ್ಪಿಕೊಳ್ಳುವ ಮೊದಲು, ನೀವು ಪರಿಶೀಲಿಸಬೇಕಾದ ಹಲವಾರು ಅಂಶಗಳಿವೆ. ಅದರೊಂದಿಗೆ, ನಿಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿಡಿಸಲು ಮತ್ತು ನಿಖರವಾದ ನಿರ್ಧಾರ ತೆಗೆದುಕೊಳ್ಳಲು, ಕೆಲವು ಪ್ರಶ್ನೆಗಳನ್ನು ಉತ್ತರಿಸುವ ಅನಿವಾರ್ಯತೆ ಇದೆ. ಅಂತಹ ಕೆಲವು ಅಂಶಗಳ ಕುರಿತು ಈ ಲೇಖನ ವಿಶ್ಲೇಷಿಸುತ್ತದೆ. 

ಒಬ್ಬ ಪ್ರಖ್ಯಾತ ಚೈನೀಸ್ ತತ್ವಜ್ಞಾನಿಯ ಅನುಸಾರ, “ನೀವು ಇಷ್ಟ ಪಡುವ ಉದ್ಯೋಗವನ್ನು ಆಯ್ದುಕೊಂಡರೆ, ನೀವು ನಿಮ್ಮ ಜೀವನದಲ್ಲಿ ಒಂದು ದಿನವೂ ಕೆಲಸ ಮಾಡಬೇಕಾಗುವುದಿಲ್ಲ.” ಹಾಗಾಗಿ, ಕೆಲಸವನ್ನು ಹುಡುಕಿಕೊಳ್ಳುವುದು ಎಷ್ಟುಅಗತ್ಯವೋ, ಅದಕ್ಕಿಂತ ಅಗತ್ಯ ಈ ಉದ್ಯೋಗ ನಿಮ್ಮ ವ್ಯಕ್ತಿತ್ವ, ನಿಮ್ಮ ಕೌಶಲ್ಯಗಳು ಮತ್ತು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೊಳ್ಳುವುದು.  

ನೀವು ಉದ್ಯೋಗವನ್ನು ಹುಡುಕುತ್ತಿರುವಾಗ, ಕೇವಲ ಕೆಲಸ ಅಷ್ಟೇ ಅಲ್ಲದೆ, ಬೇರೆಯ ಕೆಲವು ಅಂಶಗಳನ್ನು ಪರಿಗಣಿಸುವುದು ಮುಖ್ಯ. ಕೆಲಸವು ಮುಖ್ಯವಾದುದು, ಆದರೆ ಕೇವಲ ಸಂಬಳ ಮತ್ತು ಕೆಲಸದ ಜವಾಬ್ದಾರಿಗಳಿಗಿಂತ ಹೆಚ್ಚಿನದನ್ನು ಪರಿಗಣನೆಗೆ ತೆಗೆದುಕೊಂಡು, ಪರಿಶೀಲಿಸುವುದು ಒಳ್ಳೆಯದು. ನೀವು ನಿಮ್ಮ ಉದ್ಯೋಗವನ್ನು ಸಂತೋಷದಿಂದ ನಿರ್ವಹಿಸದಿದ್ದರೆ, ಅದು ಎಷ್ಟು ಒಳ್ಳೆಯ ಕೆಲಸ ಎಂಬುದು ಮುಖ್ಯವಾಗುವುದಿಲ್ಲ. ಏಕೆಂದರೆ ಆ ಉದ್ಯೋಗ ಎಷ್ಟೇ ಒಳ್ಳೆಯದಾಗಿದ್ದರೂ, ಅದು ನಿಮಗೆ  ತೃಪ್ತಿಯನ್ನು ನೀಡುವುದಿಲ್ಲ.

ಮನುಷ್ಯ ಒಬ್ಬ ಸಾಮಾಜಿಕ ಜೀವಿ. ಔದ್ಯೋಗಿಕ ಜೀವನ ಒಬ್ಬ ಮಾನವನಿಗೆ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆತನ ಅಥವಾ ಆಕೆಯ ವೈಯಕ್ತಿಕ ಜೀವನ. ಹಾಗಾಗಿ, ಒಬ್ಬ ವ್ಯಕ್ತಿ ಉದ್ಯೋಗವನ್ನು ಹುಡುಕುವಾಗ, ತನ್ನ ಜೀವನಶೈಲಿಗೆ, ತನ್ನ ವೈಯಕ್ತಿಕ ಜೀವನಕ್ಕೆ ಸೂಕ್ತವಾಗಿ ಹೊಂದಿಕೊಳ್ಳುವ ಉದ್ಯೋಗವನ್ನು ಪಡೆದುಕೊಳ್ಳುವುದು ಅತ್ಯಂತ ಮುಖ್ಯ. ನೀವು ಒಪ್ಪಿಕೊಳ್ಳುವ ಉದ್ಯೋಗವು ನಿಮ್ಮ ಅಗತ್ಯತೆಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಅದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಆಕಾಂಕ್ಷೆಗಳೊಂದಿಗೆ ಸೂಕ್ತವಾಗಿ ಬೆಸೆಯಬೇಕು.

ನೀವು ಉದ್ಯೋಗವನ್ನು ಅರ್ಜಿ ಸಲ್ಲಿಸುವಾಗ ಅಥವಾ ಉದ್ಯೋಗ ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳುವಾಗ, ಅದು ನಿಮ್ಮ ವ್ಯಕ್ತಿತ್ವ, ನಿಮ್ಮ ವೈಯಕ್ತಿಕ ಜೀವನ ಮತ್ತು ನಿಮ್ಮ ಔದ್ಯೋಗಿಕ ಉದ್ದೇಶಗಳನ್ನು ಸಮರ್ಥವಾಗಿ ತೃಪ್ತಿಗೊಳಿಸುತ್ತದೆಯೇ? – ಎನ್ನುವುದನ್ನು ನಿರ್ಧರಿಸುವುದು ಹೇಗೆ. ಅದಕ್ಕಿಂತ ಮುಖ್ಯವಾಗಿ, ನಿಮಗೆ ಬಂದಿರುವ ಕೆಲಸದ ಪ್ರಸ್ತಾಪವನ್ನು ಸ್ವೀಕರಿಸಬೇಕೆ ಎಂದು ನೀವು ಹೇಗೆ ತಿಳಿದುಕೊಳ್ಳಬೇಕು? ಇದು ದೃಢವಾದ ಸಾಂಪ್ರದಾಯಿಕ ಪ್ರಕ್ರಿಯೆಯನ್ನು ಅನುಸರಿಸಿ ನಿರ್ಧರಿಸುವ ಕಾರ್ಯವಲ್ಲ. ಇದನ್ನು ನಿರ್ಧರಿಸಲು ಚಿಂತನಶೀಲ ಪ್ರಕ್ರಿಯೆಯ ಅಗತ್ಯತೆ ಇರುತ್ತದೆ. ನೀವು ಚಿಂತನಶೀಲರಾಗಿ  ಯೋಚಿಸಿದರೆ, ನಿಮ್ಮ ಜೀವನಕ್ಕೆ  ಮತ್ತು ನಿಮ್ಮ ಜೀವನದ ಗುರಿಗೆ ಸೂಕ್ತವಾದ ಉದ್ಯೋಗವನ್ನು ಆಯ್ದುಕೊಳ್ಳಬಹುದು. ಯಾವುದೇ ದೃಢವಾದ ಪುರಾವೆಗಳು ಇಲ್ಲವಾದರೂ, ಚಿಂತನಶೀಲ ಪ್ರಕ್ರಿಯೆಯನ್ನು ಅನುಸರಿಸುವುದರಿಂದ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.

ಪರಿಗಣಿಸಬೇಕಾದ ವಿಭಿನ್ನ ಅಂಶಗಳು

ನೀವು ಬಯಸುವ ಉದ್ಯೋಗದಲ್ಲಿ ನೀವು ಅಪೇಕ್ಷಿಸುವ ಲಕ್ಷಣಗಳು ಮತ್ತು ಕಾರ್ಯ ವೈಖರಿಯ ಪಟ್ಟಿಯನ್ನು ಮೊದಲು ತಯಾರಿಸಿಕೊಳ್ಳಿ. ಇದು ಉದ್ಯೋಗದ ಸೂಕ್ತತೆಯನ್ನು ತಿಳಿದುಕೊಳ್ಳಲು ಮೊದಲ ಹೆಜ್ಜೆ. ಅಪೇಕ್ಷಿತ ಕೆಲಸಕ್ಕಾಗಿ ಪ್ರತಿಯೊಬ್ಬರ ಪ್ರೊಫೈಲ್ ಭಿನ್ನವಾಗಿರುತ್ತದೆ, ಆದರೆ ನಿಮ್ಮ ಪಟ್ಟಿಯನ್ನು ನೀವು ಕಂಪೈಲ್ ಮಾಡುವಾಗ ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ:

ಉದ್ಯೋಗ ವಿಷಯ

ನೀವು ಆಯ್ದುಕೊಳ್ಳುವ ಉದ್ಯೋಗ ನಿಮ್ಮನ್ನು ಉತ್ತೇಜಿಸುತ್ತದೆಯೇ? ಈ ಉದ್ಯೋಗಕ್ಕೆ ಸಂಬಂಧಿತ  ದೈನಂದಿನ ಕಾರ್ಯಗಳು ನಿಮಗೆತೃಪ್ತಿ ನೀಡಬಹುದೇ? ನೀವು ಕೆಲಸವನ್ನು ಆನಂದಿಸದಿದ್ದರೆ ಅತಿ ಹೆಚ್ಚು ಸಂಭಾವನೆ ನೀಡುವ ಅಥವಾ ಅತ್ಯಂತ ಪ್ರತಿಷ್ಠಿತ ಉದ್ಯೋಗ ಕೂಡ ಬೇಗನೆ ಹಳೆಯದಾಗಬಹುದು ಮತ್ತು ಬೇಸರ ತರಿಸಬಹುದು. ಹಾಗೆಯೆ ಇಂತಹ ಉದ್ಯೋಗದಲ್ಲಿ ನೀವು ಮುಂದುವರಿದರೆ, ಅದು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡುತ್ತದೆ. ನೀವು ಆಯ್ದುಕೊಳ್ಳಬೇಕು ಎಂದುಕೊಳ್ಳುತ್ತಿರುವ ಉದ್ಯೋಗದಲ್ಲಿ, ನೀವು ನಿರ್ವಹಿಸುವ ಕಾರ್ಯಗಳು, ನಿಮ್ಮ ಎಲ್ಲಾ ಕೌಶಲ್ಯಗಳನ್ನು ಉಪಯೋಗಿಸಿಕೊಳ್ಳುತ್ತದೆಯೇ ಎನ್ನುವುದನ್ನು ಪರಿಶೀಲಿಸಿ. ನಿಮ್ಮ ಉತ್ತರ ಸಕಾರಾತ್ಮಕವಾಗಿದ್ದರೆ, ನೀವು ಇಂತಹ ಉದ್ಯೋಗದಿಂದ ಚೈತನ್ಯ ಹೊಂದುತ್ತೀರಿ ಮತ್ತು ಉದ್ಯೋಗ ಸ್ಥಾನದಲ್ಲಿ ಯಶಸ್ವಿಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. 

ಇವುಗಳನ್ನು ಅರಿತುಕೊಳ್ಳಲು ನಿಮ್ಮ ಪ್ರಮುಖ ಕೌಶಲ್ಯಗಳ ಪಟ್ಟಿಯನ್ನು ತಯಾರಿಸಿ, ಅದರೊಂದಿಗೆ  ನಿಮ್ಮ ಹಿಂದಿನ ಉದ್ಯೋಗಗಳು ಇತಿಹಾಸ, ನೀವು ಕೈಗೊಂಡಿದ್ದ ಸ್ವಯಂಸೇವಕ ಕೆಲಸಗಳು, ವಿವಿಧ ಬಗೆಯ ಚಟುವಟಿಕೆಗಳು ಮತ್ತು ನಿಮ್ಮ ಶೈಕ್ಷಣಿಕ ಅರ್ಹತೆಯನ್ನು ಸಹ ಪರಿಶೀಲಿಸಿ. ಇವೆಲ್ಲವುಗಳನ್ನು ಪರಿಶೀಲಿಸಿ, ನೀವು ಹೆಚ್ಚು ಆನಂದಿಸಿರುವಂತಹ ಉದ್ಯೋಗವನ್ನು ಹುಡುಕುವುದು ಅಥವಾ ಆಯ್ದುಕೊಳ್ಳುವುದು ಹೆಚ್ಚು ಸೂಕ್ತ.

ನೀವು ಕೆಲಸದ ವಿವರಣೆಯನ್ನು ತಿಳಿದುಕೊಳ್ಳುವಾಗ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾದ ನಂತರ ಪ್ರಕ್ರಿಯೆಯ ಅನುಸಾರ ಉದ್ಯೋಗ ಸ್ಥಾನದ ಕುರಿತಾಗಿ ಚರ್ಚಿಸುವಾಗ, ನೀವು ಬಳಸಲು ಬಯಸುವ ಕೌಶಲ್ಯಗಳ ಪಟ್ಟಿಯೊಂದಿಗೆ ಕೆಲಸವು ಎಷ್ಟು ಸರಿಹೊಂದುತ್ತದೆ ಎಂಬುದನ್ನು ಅಳೆಯಿರಿ.

ವೃತ್ತಿ ತರಬೇತುದಾರ ಮತ್ತು ಪ್ರಖ್ಯಾತ ಭಾಷಣಕಾರರಾದ ಡಾನಾ ಮಾನ್ಸಿಯಾಗ್ಲಿ ಅವರ ಪ್ರಕಾರ ನೀವು ನಿಮಗೆ ಸೂಕ್ತವಾದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು, ಈ ಕೆಳಗಿನ ಪ್ರಮುಖ ಪ್ರಶ್ನೆಗಳನ್ನು  ನಿಮಗೆ ನೀವೇ ಕೇಳಿಕೊಂಡು ಪರಿಶೀಲಿಸಿ: 

  • ಉದ್ಯೋಗಕ್ಕೆ ಸಂಬಂಧಿಸಿದ ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ನೀವು ಉದ್ಯೋಗದ  ಪೂರ್ತಿ ಸಮಯ ಮಾಡಲು ಬಯಸುವಿರಾ? 
  • ನೀವು ಕೆಲಸ ಮಾಡುವ ತಂಡ ಮತ್ತು ಪರಿಸರವು ಆಹ್ಲಾದಕರ ಮತ್ತು ಸುರಕ್ಷಿತವೆಂದು ತೋರುತ್ತದೆಯೇ? 
  • ಈ ನಿರ್ದಿಷ್ಟ ಕೆಲಸವನ್ನು ತೆಗೆದುಕೊಳ್ಳುವ ಮೂಲಕ ನೀವು ಮಾಡುತ್ತಿರುವ ತ್ಯಾಗಗಳು ಯಾವುವು? ಮತ್ತು ಆ ತ್ಯಾಗಗಳಲ್ಲಿ ಯಾವುದಾದರೂ ನೀವು ಬಿಟ್ಟುಕೊಡಲು ಬಯಸುವುದಿಲ್ಲವೇ?

ಮೂಲಭೂತವಾಗಿ, ನೀವು ಆಯ್ದುಕೊಳ್ಳಲು ಬಯಸುವ ಈ ಹೊಸ ವೃತ್ತಿಯ ನಿಮ್ಮ ದಿನನಿತ್ಯದ ಜೀವನದಲ್ಲಿ ನಿಮ್ಮ ಸಂತೋಷಕ್ಕೆ ಬೆಂಬಲಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಉತ್ತರಗಳ ಬಗ್ಗೆ ನಿಮಗೆ ಸರಿಯೆನಿಸಿದರೆ, ಅವು ಸಕಾರಾತ್ಮಕವಾಗಿದ್ದರೆ, ಸಂತೋಷದಿಂದ ಮುಂದುವರಿಯಿರಿ” ಎಂದು ಮಾನ್ಸಿಯಾಗ್ಲಿ ಹೇಳುತ್ತಾರೆ. ನೀವು ಅಲ್ಲಿ ಕೆಲಸ ಮಾಡಲು ಸಿದ್ಧರಿಲ್ಲದಿದ್ದರೆ ಪ್ರಸ್ತಾಪವನ್ನು ಸ್ವೀಕರಿಸುವುದು ಅಥವಾ ಮಾತುಕತೆ ನಡೆಸುವ ಅಗತ್ಯತೆಯೇ ಇಲ್ಲ. 

ಉದ್ಯೋಗ ಪ್ರಗತಿಗೆ ಅವಕಾಶ 

ನೀವು ನಿಮ್ಮ ಬಳಿ ಇರುವ ಉದ್ಯೋಗ ಪ್ರಸ್ತಾಪದಲ್ಲಿ ಮುಂದುವರೆಯಲು ಬಯಸಿದರೆ, ಆ ಉದ್ಯೋಗದ ವೃತ್ತಿ ಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳಿ. ಆ ಸಂಸ್ಥೆಯ ಸಿಬ್ಬಂಧಿಗಳ ಜೊತೆ ಚರ್ಚಿಸಿ, ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ. ಅವರಿಂದ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಬಡ್ತಿ ಅಥವಾ ಪ್ರಮೋಷನ್ ಬಗ್ಗೆ ಸಹ ತಿಳಿದುಕೊಳ್ಳಿ. ಬಡ್ತಿಯಾದ ನಂತರ ನಿಮ್ಮ ಉದ್ಯೋಗದ ವೃತ್ತಿ ಜವಾಬ್ದಾರಿಗಳು ಮತ್ತು ಸರಾಸರಿ ವೇತನದ ಬಗ್ಗೆ ಸಹ ತಿಳಿದುಕೊಳ್ಳಿ. 

ಸಂಬಳ

ಒಳ್ಳೆಯ ಉದ್ಯೋಗ ಮತ್ತು ಅರ್ಹತೆಗೆ ಸರಿಯಾದ ಸ್ಥಾನ ಹೇಗೆ ಮುಖ್ಯವೊ, ಹಾಗೆಯೆ, ಸರಿಯಾದ ಆದಾಯ ಕೂಡ ತುಂಬಾ ಮುಖ್ಯವಾದದ್ದು. ಕೇವಲ ವೃತ್ತಿಯಲ್ಲಿ ಉನ್ನತ ಸ್ಥಾನ ಹಾಗೂ ಗೌರವ ಸಿಕ್ಕರೆ ಅಷ್ಟೇ ಸಾಲದು, ಪರಿಶ್ರಮಕ್ಕೆ ತಕ್ಕ ಆದಾಯ, ಮಾನವನಿಗೆ ನೆಮ್ಮದಿ ಕೊಡುತ್ತದೆ. ಏಕೆಂದರೆ ಸಾಮಾನ್ಯ ಜೀವನ ನಡಿಸಲು ಕೂಡ ಹಣದ ಅವಶ್ಯಕತೆ ತುಂಬಾ ಇದೆ.

ನಿಮಗೆ ಅಗತ್ಯವಿರುವ, ನೀವು ಬಯಸುವ ಮತ್ತು ನಿಮಗೆ ಅರ್ಹವಾದ ಆದಾಯ ಮತ್ತು ಪ್ರಯೋಜನಗಳ ಮಟ್ಟವನ್ನು ನೀವು ತಿಳಿದುಕೊಳ್ಳಿರಿ. ನೀವು ನೆಲೆಸಿರುವ ಸ್ಥಳ, ನೀವು ಕಾರ್ಯ ನಿರ್ವಹಿಸುವ ಕ್ಷೇತ್ರ ಮತ್ತು ನಿಮ್ಮ ವೃತ್ತಿ ಜವಾಬ್ದಾರಿಗಳು ಬಗ್ಗೆ ದೀರ್ಘವಾಗಿ ತಿಳಿದುಕೊಳ್ಳಿ. ಮತ್ತು ಅದಕ್ಕೆ ಸೂಕ್ತವಾದ ಸರಾಸರಿ ವೇತನ ನಿಮಗೆ ದೊರಕುತ್ತದೆಯೇ ಎನ್ನುವುದನ್ನು ಸಹ ಅರಿತುಕೊಳ್ಳಿ. ಏಕೆಂದರೆ ನೀವು ಹೊಸ ಉದ್ಯೋಗಕ್ಕೆ ಸೇರಿದ ನಂತರ, ನಿಮ್ಮಷ್ಟೇ ಅನುಭವವಿರುವ, ನಿಮ್ಮ ಗೆಳೆಯರೊಂದಿಗೆ ನಿಮ್ಮ ವೇತನವನ್ನು, ಕಾರ್ಯವೈಖರಿಯನ್ನು ಹೋಲಿಸಿ, ನಿಮಗೆ ಕಡಿಮೆ ವೇತನವಿದೆ ಎಂದು ಗೊತ್ತಾದರೆ ಅದು ಅತ್ಯಂತ ನಿರಾಶಾದಾಯಕವಾಗಿರುತ್ತದೆ.

‘ನಿಮ್ಮ ಉದ್ಯೋಗದಿಂದ ನಿಮ್ಮ ಅಗತ್ಯಗಳನ್ನು ಪೂರೈಸುವುದು ಬಹಳ ಮುಖ್ಯ’ ಎಂದು ಸ್ವಯಂಚಾಲಿತ ನೇಮಕಾತಿ ವೇದಿಕೆಯಾದ ಟಿಲ್ರ್‌ನ ಸಿಇಒ ಕ್ಯಾರಿಸಾ ಮಿಕ್ಲುಸಾಕ್ ಹೇಳುತ್ತಾರೆ. ಉದ್ಯೋಗ ಪ್ರಸ್ತಾಪವನ್ನು ಮೌಲ್ಯ ಮಾಪನ ಮಾಡುವಾಗ, ನೀವು ಕೇವಲ ವೇತನವನ್ನು ಮಾತ್ರವಲ್ಲದೆ ಆ ಉದ್ಯೋಗದಿಂದ ನಿಮ್ಮ ಜೀವನಕ್ಕೆ ಆಗುವ ಸಂಪೂರ್ಣ ಲಾಭ ಮತ್ತು ನಷ್ಟಗಳನ್ನು ಪರಿಶೀಲಿಸಿ, ಪರಿಗಣಿಸಬೇಕು.

ಮೂಲ ವೇತನ ಮಾತ್ರ ಸಂಪೂರ್ಣ ಪರಿಹಾರದ ಚಿತ್ರವನ್ನು ಒದಗಿಸುವುದಿಲ್ಲ. ಸಂಬಳವು ನೀವು ನಿರೀಕ್ಷಿಸಿದ್ದಕ್ಕಿಂತ ತುಸು ಕಡಿಮೆ ಇರಬಹುದು, ಆದರೆ ನೀಡಲಾಗುವ ಪೂರ್ಣ ಪ್ಯಾಕೇಜ್ ಅದನ್ನು ಸಮತೋಲನಗೊಳಿಸುತ್ತದೆ ಎಂದು ಮಿಕ್ಲುಸಾಕ್ ವಿವರಿಸುತ್ತಾರೆ. ಒಟ್ಟು ಪ್ಯಾಕೇಜ್ ನಿಮ್ಮ ವೈಯಕ್ತಿಕ ಮತ್ತು ಆರ್ಥಿಕ ಅಗತ್ಯಗಳಿಗೆ ಏನು ಕೊಡುಗೆ ನೀಡುತ್ತದೆ? ಕೆಲವೊಮ್ಮೆ, ಮೊದಲ ನೋಟದಲ್ಲಿ ಅದು ಕಡಿಮೆ ಪಾವತಿಸುತ್ತಿದೆ ಎಂದು ತೋರುತ್ತಿರುವ ಕೆಲಸವು, ಹೆಚ್ಚಿನ ಸಂಬಳ ಹೊಂದಿರುವ ಉದ್ಯೋಗಕ್ಕಿಂತ ಹೆಚ್ಚಿನ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ”ಸಬ್ಸಿಡಿ ಪಡೆದ ಮಕ್ಕಳ ಆರೈಕೆ, ಬೋನಸ್ ಅವಕಾಶಗಳು ಮತ್ತು ಆರೋಗ್ಯ ರಕ್ಷಣೆ ಆಯ್ಕೆಗಳಂತಹ ಪ್ರಯೋಜನಗಳನ್ನು, ಇತರ ಬಗೆಯ ಲಾಭಗಳನ್ನೂ ನೀವು ಗಣನೆಗೆ ತೆಗೆದುಕೊಳ್ಳಬೇಕು.

ಕೆಲಸದ ಭದ್ರತೆ

ಉದ್ಯೋಗದಾತನು ಬೆಳೆಯುತ್ತಿರುವ ಅಥವಾ ಕುಸಿಯುತ್ತಿರುವ ಉದ್ಯಮದಲ್ಲಿದ್ದಾನೆಯೇ, ಅವರ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿದೆಯೇ ಅಥವಾ ಕಡಿಮೆಯಾಗುತ್ತಿದೆಯೇ ಮತ್ತು ಅವರ ಕಾರ್ಯನಿರ್ವಾಹಕ ನಾಯಕತ್ವದ ಗುಣಮಟ್ಟವು, ಭವಿಷ್ಯದಲ್ಲಿ ನಿಮ್ಮನ್ನು ವಜಾಗೊಳಿಸುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಭದ್ರತೆಯ ಬಗ್ಗೆ ನಿಗಾವಹಿಸುವುದು ನಿಮಗೆ ಒಳ್ಳೇದು.

ಸಂಘಟನೆಯ ಸಂಸ್ಕೃತಿ

ಸಾಂಸ್ಥಿಕ ಸಂಸ್ಕೃತಿಯು ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಬೇಕಾದುದನ್ನು ನೀಡುತ್ತದೆಯೇ ಮತ್ತು ಅದು ನಿಮ್ಮ ಜೀವನಶೈಲಿಗೆ ಸರಿಹೊಂದುತ್ತದೆಯೆ ಎಂದು ನೀವು ಖಚಿತ ಪಡಿಸಿಕೊಳ್ಳಬೇಕು.

ಅನೇಕ ಕಾರ್ಮಿಕರಿಗೆ ತಮ್ಮ ಕೆಲಸದ ಕುರಿತಾಗಿ ಉಂಟಾಗುವ ಭಾವನೆ ಸಂಸ್ಥೆಯ ಸಂಸ್ಕೃತಿಯ ಮೌಲ್ಯಗಳಾಧಾರಿತವಾಗಿರುತ್ತದೆ. ಆದ್ದರಿಂದ ಸಂಸ್ಥೆಯ ಸಂಸ್ಕೃತಿ ಕಾರ್ಮಿಕರ ಜೀವನಶೈಲಿಯೊಂದಿಗೆ ಸಂಯೋಜಿಸುವುದು ಅತ್ಯಂತ ಮುಖ್ಯ. ಆ ಸಂಸ್ಥೆಯ ಡ್ರೆಸ್ ಕೋಡ್ ಎಷ್ಟು ಔಪಚಾರಿಕ ಅಥವಾ ಅನೌಪಚಾರಿಕವಾಗಿದೆ? ಸಂಸ್ಥೆಯು ಹೊಸತನವನ್ನು ಗೌರವಿಸುತ್ತದೆಯೇ? ನಿರ್ಧಾರಗಳು ಉನ್ನತ ನಿರ್ವಹಣೆಯಿಂದ ಕೆಳಕ್ಕೆ ಹರಿಯುತ್ತವೆಯೇ ಅಥವಾ ಪ್ರಕ್ರಿಯೆಯು ಹೆಚ್ಚು ಪ್ರಜಾಪ್ರಭುತ್ವವಾಗಿದೆಯೇ? ಕೆಲಸ/ಜೀವನ ಸಮತೋಲನವನ್ನು ಸಂಸ್ಥೆಯಲ್ಲಿ ಪ್ರೋತ್ಸಾಹಿಸಲಾಗಿದೆಯೇ ಅಥವಾ ನೌಕರರು ವಾರಕ್ಕೆ 60 ಗಂಟೆಗಳ ಕಾಲ ಕೆಲಸ ಮಾಡುವ ನಿರೀಕ್ಷೆಯಿದೆಯೇ? ಪರಿಸರ ಸಮಸ್ಯೆಗಳ ಬಗ್ಗೆ ಸಂಸ್ಥೆಗೆ ಕಾಳಜಿ ಇದೆಯೇ? ಸಮುದಾಯ ಸೇವೆಯನ್ನು ಮಾಡಲು ಅವರು ನೌಕರರನ್ನು ಪ್ರೋತ್ಸಾಹಿಸುತ್ತಾರೆಯೇ? ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ನಿಮಗೇ ಒಳಿತು.

ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಉದ್ಯೋಗ ಪುಟವನ್ನು ಅನ್ವೇಷಿಸಿ. ಆ ಸಂಸ್ಥೆಯ ಸಂಸ್ಕೃತಿ ನಿಮಗೆ ಸೂಕ್ತವಾದುದಾಗಿದೆ ಎಂದು ಕಂಡುಹಿಡಿಯಲು ಇದು ನಿಮಗೆ ಸಹಾಯ ಮಾಡುತ್ತದೆ.

ಕಂಪನಿಗೆ ಸಂಬಂಧಿತ ವಿಷಯಗಳನ್ನು ತಿಳಿದುಕೊಳ್ಳಲು ಗೂಗಲ್ ನ್ಯೂಸ್ ಅಲರ್ಟ್ ಬಳಿಸಿ. ಕಂಪನಿಯು ಸಾರ್ವಜನಿಕರಿಗೆ ಉತ್ತೇಜಿಸುವ ಮೌಲ್ಯಗಳ ಬಗ್ಗೆ ಮತ್ತು ಸುದ್ದಿ ಮಾಧ್ಯಮದಲ್ಲಿ ಅದನ್ನು ಹೇಗೆ ಗ್ರಹಿಸಲಾಗುತ್ತದೆ ಎಂಬುದರ ಕುರಿತು ತಿಳಿಯಲು ಇದು ನಿಮಗೆ ಸಹಾಯ ಮಾಡುತ್ತದೆ.

ನಿಮಗೆ ಅಗತ್ಯವಿರುವ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನದ ಸಮತೋಲನದ ಬಗ್ಗೆ ಅರಿತುಕೊಳ್ಳಿ ಮತ್ತು ಸಂಸ್ಥೆಯ ಕಾರ್ಪೊರೇಟ್ ಸಂಸ್ಕೃತಿ ನಿಮ್ಮ ಜೀವನದಲ್ಲಿ ಆ ಸಮತೋಲನವನ್ನು ಬೆಂಬಲಿಸುತ್ತದೆಯೇ ಎಂದು ಆಲೋಚಿಸಿ. ನಿಮ್ಮ ಪ್ರಸ್ತುತ ಮತ್ತು ಭವಿಷ್ಯದ ಯೋಜನೆಗಳನ್ನು ಪರಿಗಣಿಸಿ. ಉದಾಹರಣೆಗೆ, ನೀವು ಮುಂದಿನ ದಿನಗಳಲ್ಲಿ ಮಗುವನ್ನು ಹೊಂದಲು ಯೋಜಿಸುತ್ತಿದ್ದರೆ, ಕಂಪನಿಯು ವರ್ಕ್ ಫ್ರಮ್ ಹೋಮ್ ನಂತಹ ಅಥವಾ ಫ್ಲೆಕ್ಸಿಬಲ್ ಕಾರ್ಯವೈಖರಿಯನ್ನು ಅನುಮತಿಸುತ್ತದೆಯೇ ಎಂದು ನೀವು ಪರಿಗಣಿಸಬಹುದು.

ನೀವು ಬಯಸುವ ಗುಣವುಳ್ಳ ಕಂಪನಿಯನ್ನು ಹುಡುಕಿ

ನಿಮ್ಮದೇ ಆದ ಸ್ವಂತ ಗುಣಗಳ ಪಟ್ಟಿಯನ್ನು ತಯಾರಿಸಿ. ಆ ಪಟ್ಟಿಗೆ ತಕ್ಕಂತೆ ಉದ್ಯೋಗ ಮತ್ತು ಸಂಸ್ಥೆಗಳನ್ನು ಹುಡುಕಿ.  ಕಂಪನಿಯ ವೆಬ್‌ಸೈಟ್‌ಗಳಲ್ಲಿ ಮಿಷನ್ ಸ್ಟೇಟ್‌ಮೆಂಟ್‌ಗಳು ಮತ್ತು “ನಮ್ಮ ಬಗ್ಗೆ” ಪುಟಗಳನ್ನು ನೋಡುವ ಮೂಲಕ ಅಥವಾ ವೃತ್ತಿಪರ ಸಮ್ಮೇಳನಗಳು ಮತ್ತು ಕಾರ್ಯಕ್ರಮಗಳಲ್ಲಿ ಸಂಸ್ಥೆಯ ಮಾಜಿ ಅಥವಾ ಪ್ರಸ್ತುತ ಉದ್ಯೋಗಿಗಳೊಂದಿಗೆ ಮಾತನಾಡುವ ಮೂಲಕ ನೀವು ಆ ಸಂಸ್ಥೆಯ ಕಾರ್ಪೊರೇಟ್ ಮೌಲ್ಯಗಳನ್ನು ಹುಡುಕಬಹುದು. 

ಉದಾಹರಣೆಗೆ, ನೀವು ಕಂಪನಿಯ ವೆಬ್‌ಸೈಟ್‌ಗಳಲ್ಲಿ ಮಿಷನ್ ಸ್ಟೇಟ್‌ಮೆಂಟ್‌ಗಳನ್ನು ನೋಡಬಹುದು.  ಆ ಮಿಷನ್ ಹೇಳಿಕೆಗಳಲ್ಲಿ ನೀವು ಹುಡುಕುತ್ತಿರುವ ಪ್ರಮುಖ ಕೀವರ್ಡ್ ಗಳಿದ್ದರೆ, ಆ ಸಂಸ್ಥೆ ನಿಮ್ಮ ವ್ಯಕ್ತಿತ್ವಕ್ಕೆ ಮತ್ತು ನಿಮ್ಮ ಔದ್ಯೋಗಿಕ ಆಸೆಗಳಿಗೆ ಪೂರಕವಾಗಿರುತ್ತದೆ.

ವೃತ್ತಿಪರ ಅಭಿವೃದ್ಧಿ ಅವಕಾಶಗಳನ್ನು ಮೌಲ್ಯೀಕರಿಸುವ ಕೆಲಸವನ್ನು ನೀವು ಬಯಸಿದರೆ, ಅವರ ವೆಬ್‌ಸೈಟ್‌ನಲ್ಲಿ ಇದನ್ನು ಉತ್ತೇಜಿಸುವುದೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ. 

ವೃತ್ತಿ-ಜೀವನ ಸಮತೋಲನವನ್ನು ಮೌಲ್ಯೀಕರಿಸುವಂತಹದನ್ನು ನೀವು ಬಯಸಿದರೆ, ನೀವು ಅವರ ವೆಬ್‌ಸೈಟ್‌ನಲ್ಲಿ ಇದಕ್ಕೆ ಸಂಬಂಧಿತ ವಿಷಯವನ್ನು ನೀವು ಶೋಧಿಸಬೇಕು.

ವ್ಯವಸ್ಥಾಕರು

ನಿಮಗೆ ಸೂಕ್ತವಾಗುವ ಆದರ್ಶ ಮ್ಯಾನೇಜರ್ ಹೇಗಿರಬೇಕು ಎನ್ನುವುದನ್ನು ಅರಿತುಕೊಳ್ಳಿ. ನೀವು ಕೆಲಸ ಮಾಡಲು ಉದ್ದೇಶಿಸುತ್ತಿರುವ ಸ್ಥಳದಲ್ಲಿರುವ ಮ್ಯಾನೇಜರ್ ಅನ್ನು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಿ. ನೀವು ಅಧಿಕಾರದ ಅಮಲು ಇರುವಂತವರನ್ನು  ಬಯಸುತ್ತೀರಾ ಅಥವಾ ನಿಮ್ಮನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡುವಂತಹವರನ್ನು ಬಯಸುತ್ತೀರಾ ಎಂಬಂತಹ ಅಂಶಗಳನ್ನು ಪರಿಗಣಿಸಿ. ನಿಮ್ಮ ಸಂಭವನೀಯ ಮೇಲ್ವಿಚಾರಕರ ನಿರ್ವಹಣಾ ಶೈಲಿಯನ್ನು ವಿವರಿಸಲು ನಿರೀಕ್ಷಿತ ಸಹೋದ್ಯೋಗಿಗಳನ್ನು ಕೇಳಿ ಮತ್ತು ವ್ಯಕ್ತಿಯ ವ್ಯಕ್ತಿತ್ವವು ನಿಮ್ಮೊಂದಿಗೆ ಹೇಗೆ ಬೆರೆಯುತ್ತದೆ ಎಂಬುದರ ಕುರಿತು ಮೌಖಿಕ ಮತ್ತು ಮೌಖಿಕ ಸೂಚನೆಗಳನ್ನು ಗಮನಿಸಿ, ಅರ್ಥೈಸಿಕೊಳ್ಳಿ. ನಿಮ್ಮ ವ್ಯವಸ್ಥಾಪಕರಾಗಿರುವ ವ್ಯಕ್ತಿ ನಿಮಗೆ ಇಷ್ಟವಾಗದಿದ್ದರೆ, ಉದ್ಯೋಗವನ್ನು ಸ್ವೀಕರಿಸುವ ಬಗ್ಗೆ ಎಚ್ಚರಿಕೆಯಿಂದ ಯೋಚಿಸಿ.

ಕಂಪನಿಯಲ್ಲಿ ಕೆಲಸ ಮಾಡುವ ಜನರನ್ನು ಸಂಪರ್ಕಿಸಿ

ಕಂಪನಿಯಲ್ಲಿ ಕೆಲಸ ಮಾಡುವ ಇತರ ಕಾರ್ಮಿಕರೊಂದಿಗೆ ಮಾತನಾಡುವುದು, “ನಿರ್ಧಿಷ್ಟ ಸಂಸ್ಥೆಯು ಕೆಲಸ ಮಾಡಲು ಉತ್ತಮ ಸ್ಥಳವೇ?” ಎಂಬುದನ್ನು ನಿರ್ಧರಿಸಲು ಉತ್ತಮ ಮಾರ್ಗವಾಗಿದೆ. ಸಂಸ್ಥೆಯು  ಉತ್ತಮವಾದದ್ದು ಎಂದು ನಿಮಗೆ ಅನ್ನಿಸಿದ್ದಲ್ಲಿ, ಸಂದರ್ಶನ ಪ್ರಕ್ರಿಯೆ ತಯಾರಿಗೆ ನಿಮಗೆ ಸಹಾಯ ಮಾಡಲು ನೀಮ್ಮ ಸಂಪರ್ಕಗಳನ್ನು ಬಳಸಬಹುದು.

ತಡರಾತ್ರಿ ಕೆಲಸ ಮಾಡುವ ನಿರೀಕ್ಷೆಯಿದೆಯೇ ಮತ್ತು ಅವರು ನಿಮಗೆ ಉಚಿತ ಊಟ ಅಥವಾ ಇತರ ಪ್ರಯೋಜನಗಳನ್ನು ನೀಡುತ್ತಾರೆಯೇ ಎಂಬಂತಹ ವಿಷಯ ಮತ್ತು ಅಲ್ಲಿ ಕೆಲಸ ಮಾಡುವ ರೀತಿ ರೀವಾಜುಗಳನ್ನು ವಿಚಾರಿಸಿ, ಕಾರ್ಯವೈಖರಿಯ ಬಗ್ಗೆ ಚರ್ಚೆ ಮಾಡಿ, ಮಾಹಿತಿಯನ್ನು ಪಡೆದುಕೊಳ್ಳಿ.

ಉದ್ಯೋಗ ಮತ್ತು ಉದ್ಯೋಗದಾತರನ್ನು ವಿಶ್ಲೇಷಿಸಿ

ನಿಮ್ಮ ಮಾನದಂಡಗಳನ್ನು ನೀವು ನಿರ್ಧರಿಸಿದ ನಂತರ ಉದ್ಯೋಗವನ್ನು ಆಯ್ದುಕೊಳ್ಳಲು, ಆ ಉದ್ಯೋಗ ನಿಮ್ಮ ಶೈಲಿಗೆ ಎಷ್ಟು ಸರಿಹೊಂದುತ್ತದೆ ಎಂಬುದನ್ನು ನಿರ್ಧರಿಸಲು ನಿಮಗೆ ಎರಡು ಬಗೆಯ ಆಯ್ಕೆಗಳಿವೆ. ನೀವು ಅರ್ಥಗರ್ಭಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕಾರದವರಾಗಿದ್ದರೆ, ಸ್ಥಾನದ ಬಗ್ಗೆ ನಿಮಗೆ ತಿಳಿದಿರುವುದನ್ನು ನೀವು ಸರಳವಾಗಿ ಪರಿಶೀಲಿಸಿ ಮತ್ತು ಅದು ನಿಮ್ಮ ಅಗತ್ಯಗಳನ್ನು ಪೂರೈಸುತ್ತದೆ ಎಂದು ಭಾವಿಸಿ, ಉದ್ಯೋಗವನ್ನು ಸ್ವೀಕರಿಸಬಹುದು. 

ನೀವು ಹೆಚ್ಚು ವಿಶ್ಲೇಷಣಾತ್ಮಕವಾಗಿ ಅಥವಾ ಪರಿಮಾಣಾತ್ಮಕವಾಗಿ ಆಧಾರಿತವಾಗಿ ನಿರ್ಧಾರ ತೆಗೆದುಕೊಳ್ಳುವರಾಗಿದ್ದರೆ, ಆ ಅಂಶವು ನಿಮಗೆ ಎಷ್ಟು ಮಹತ್ವದ್ದಾಗಿದೆ ಎಂಬುದರ ಆಧಾರದ ಮೇಲೆ ನಿಮ್ಮ ಮಾನದಂಡದಲ್ಲಿನ ಪ್ರತಿ ಅಂಶಕ್ಕೂ 10 ರ ಪ್ರಮಾಣದಲ್ಲಿ ನೀವು ಒಂದು ಸಂಖ್ಯೆಯನ್ನು ನಿಯೋಜಿಸಬಹುದು. ನಂತರ ನೀವು ಪರಿಗಣಿಸುತ್ತಿರುವ ಉದ್ಯೋಗವು ನಿಮಗೆ ಯಾವ ಅಂಶವನ್ನು ನೀಡುತ್ತದೆ ಎಂಬುದನ್ನು 10 ರ ಪ್ರಮಾಣದಲ್ಲಿ ರೇಟ್ ಮಾಡಿ.

ಉದಾಹರಣೆಗೆ, ಉದ್ಯೋಗದ ವಿಷಯವು ನಿಮಗೆ 10 ರ ಪ್ರಾಮುಖ್ಯತೆಯನ್ನು ಹೊಂದಿದ್ದರೆ ಮತ್ತು ಒಂದು ನಿರ್ದಿಷ್ಟ ಉದ್ಯೋಗವು ಉದ್ಯೋಗ ವಿಷಯದಲ್ಲಿ 8 ಮಟ್ಟವನ್ನು ನೀಡುತ್ತದೆ, ಆಗ ನೀವು ಆ ಅಂಶಕ್ಕಾಗಿ ಒಟ್ಟು 80 ಅಂಕಗಳನ್ನು ನಿಯೋಜಿಸುತ್ತೀರಿ. ವೇತನವು ಅಷ್ಟೊಂದು ಮುಖ್ಯವಾಗದಿದ್ದರೆ – ನೀವು 10 ರಲ್ಲಿ 8ರ ಮಟ್ಟ, ಆದರೆ ಕೆಲಸದ ಪರಿಹಾರವು 6 ರ ಮಟ್ಟದಲ್ಲಿದೆ, ಆಗ ನೀವು ಸಂಬಳಕ್ಕೆ 48 ಅಂಕಗಳನ್ನು ಹೊಂದಿರುತ್ತೀರಿ. ನಂತರ ನೀವು ನಿಮ್ಮ ಪ್ರತಿಯೊಂದು ಅಂಶಗಳಿಗೆ ಸ್ಕೋರ್ ಅನ್ನು ಸೇರಿಸಬಹುದು ಮತ್ತು ಒಟ್ಟು ಸ್ಕೋರ್ ಪಡೆಯಬಹುದು. ಆ ಸ್ಕೋರ್, ಗರಿಷ್ಠ ಸ್ಕೋರ್‌ಗೆ ಹತ್ತಿರದಲ್ಲಿದೆ ಎಂದು ನೀವು ಭಾವಿಸಿದರೆ, ಮತ್ತು ಕೆಲಸವು ನಿಮಗೆ ಸರಿಹೊಂದುತ್ತದೆ ಎಂದು ಭಾವಿಸಿದರೆ, ಅದು ಬಹುಶಃ ಉತ್ತಮವಾದದ್ದು.

ವೃತ್ತಿ ಸಮಾಲೋಚನೆ ಸೇವೆಯ ಸ್ಥಾಪಕ ಆಡ್ರಿಯನ್ ಕ್ಲಾಫಾಕ್ ಅವರ ಪ್ರಕಾರ, ಒಂದು ಉದ್ಯೋಗವು ನಿಮ್ಮ ಮೌಲ್ಯಗಳು, ಸಾಮರ್ಥ್ಯಗಳು, ಭಾವೋದ್ರೇಕಗಳು, ಉದ್ದೇಶ ಮತ್ತು ವ್ಯಕ್ತಿತ್ವದ ಪ್ರಕಾರದೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಅದು ಉತ್ತಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಹೊಂದಲು ಸ್ಪೂರ್ತಿ ಆಗುತ್ತದೆ. ಅದನ್ನು ನಿರ್ಣಯಿಸಲು, ಆ ಪ್ರತಿಯೊಂದು ಮಾನದಂಡಗಳಿಗೆ  ನೀವು ಪರಿಗಣಿಸುತ್ತಿರುವ ಉದ್ಯೋಗಗಳನ್ನು ಸ್ಕೋರ್ ಮಾಡುವ ಸರಳ ಸ್ಪ್ರೆಡ್‌ಶೀಟ್ ಅನ್ನು ರಚಿಸಿ, ಅಲ್ಲಿ 1 ರಿಂದ 10 ಅಂಕವನ್ನು ಕೊಡುವಂತೆ ರೂಪಿಸಿಕೊಳ್ಳಿ. ನಂತರ, ಪ್ರತಿ ವೃತ್ತಿಜೀವನಕ್ಕೆ ನಿಮ್ಮ ಸ್ಕೋರ್ ಅನ್ನು ಒಟ್ಟುಗೂಡಿಸಿ. ಹೆಚ್ಚಿನ ಸ್ಕೋರ್ ಹೊಂದಿರುವ ಕೆಲಸವನ್ನು ನೀವು ಸ್ವಯಂಚಾಲಿತವಾಗಿ ಆರಿಸಬೇಕಾಗಿಲ್ಲ, ಆದರೆ ಫಲಿತಾಂಶಗಳು ಬಹಳ ಪ್ರಬುದ್ಧವಾಗಿರುವುದರಿಂದ ಅವುಗಳನ್ನು ಪರಿಗಣಿಸುವುದು ಅತ್ಯುತ್ತಮ.