ಶೂನ್ಯ ವೆಚ್ಚದ ಮಾರ್ಕೆಟಿಂಗ್ ತಂತ್ರಗಳು

ನಿಮಗೆ ಇದು ತಿಳಿದಿದೆಯೇ? – ಯಾವುದೇ ವ್ಯವಹಾರ ಅಥವಾ ಬ್ಯುಸಿನೆಸ್ ಗಳಲ್ಲಿ ಹೆಚ್ಚಿನ ವೆಚ್ಚ ಉತ್ಪನ್ನ ಅಥವಾ ಸೇವೆಗಳ ಜಾಹೀರಾತಿಗಾಗಿ ಹೋಗುತ್ತದೆ. 2018 ರಲ್ಲಿ ಅಡಿದಾಸ್ ತನ್ನ ಉತ್ಪನ್ನಗಳನ್ನು ಮಾರ್ಕೆಟಿಂಗ್ ಮಾಡಲು $ 3.5 ಬಿಲಿಯನ್ ರಷ್ಟು ದುಡ್ಡು ಖರ್ಚು ಮಾಡಿದೆ. ಅಂದರೆ ಕಂಪನಿಯ ಒಟ್ಟು ಆದಾಯದ ಶೇಕಡಾ 14% ರಷ್ಟು. ನೈಕ್ ಸರಿಸುಮಾರು $ 3.8 ಬಿಲಿಯನ್ ತನ್ನ ಉತ್ಪನ್ನಗಳ ಮಾರ್ಕೆಟಿಂಗ್ ಗಾಗಿ ಬಳಸಿತು. ಅದು ಕಂಪನಿಯ 10% ರಷ್ಟು ಆದಾಯ. 

ಇಂತಹ ಮಲ್ಟಿ ಬಿಲಿಯನ್ ಕಂಪನಿ ಗಳು ತಮ್ಮ ಉತ್ಪನ್ನಗಳ ಮತ್ತು ಸೇವೆಗಳ ಮಾರ್ಕೆಟಿಂಗ್ ಗಾಗಿ ಲಕ್ಷಗಟ್ಟಲೇ ಹಣವನ್ನು ಖರ್ಚು ಮಾಡುತ್ತವೆ.ಆದರೆ ಎಲ್ಲಾ ಕಂಪನಿ ಗಳಿಗೆ ಇಂತಹ ಸೌಲಭ್ಯ ಇರುವುದಿಲ್ಲ. ಪ್ರತಿ ಕಂಪನಿ ತನ್ನ ಲಾಭಕ್ಕಾಗಿಯೇ ದುಡಿದರೂ, ಅಗತ್ಯವಿರುವ ಆದಾಯ ಅಥವಾ ಬಂಡವಾಳ ಪಡೆಯದೇ ಇರಬಹುದು. ಅಥವಾ ಆದಾಯ ಅಗತ್ಯವಿದ್ದಷ್ಟು ಇದ್ದರೂ, ಸಂಸ್ಥೆಗೆ ಯಾವುದೊ ಹಣಕಾಸಿನ ಸಮಸ್ಯೆ ಎದುರಾದಾಗ ಮೊದಲು ಕಡಿತಗೊಳಿಸುವುದೇ ಮಾರ್ಕೆಟಿಂಗ್ ವೆಚ್ಛವನ್ನು. ಹಾಗಾದರೆ ಇಂತಹ ಪರಿಸ್ಥಿತಿಯಲ್ಲಿ ಮಾರ್ಕೆಟಿಂಗ್ ಮಾಡುವುದನ್ನು ಅಥವಾ ನಿಮ್ಮ ಉತ್ಪನ್ನಗಳ ಅಥವಾ ಸೇವೆಗಳ ಜಾಹೀರಾತನ್ನು ಸಂಪೂರ್ಣವಾಗಿ ಕಡಿತಗೊಳಿಸಬೇಕೇ? ಖಂಡಿತವಾಗಿಯೂ ಇಲ್ಲ! ಹಾಗಿದ್ದರೆ, ನೀವು ಏನು ಮಾಡಬಹುದು? ಅದಕ್ಕೆ ಉತ್ತರ ಈ ಲೇಖನದಲ್ಲಿ ನಾವು ನೀಡಿದ್ದೇವೆ.

ಪ್ರಚಲಿತ ವಿದ್ಯಮಾನ ದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಯುವಜನತೆಯನ್ನು ತನ್ನ ದಾಸರನ್ನಾಗಿ ಮಾಡಿಕೊಳ್ಳುತ್ತಿರುವ ಮಾಧ್ಯಮವೇ ಸಾಮಾಜಿಕ ಜಾಲತಾಣಗಳು. ಇದು ಎಷ್ಟು ಟ್ರೆಂಡಿಂಗ್ ನಲ್ಲಿ ಇದೆ ಎಂದರೆ ಮುಂಚೆಯಂತೆ ವಿಷಯಗಳು ಹಬ್ಬಲು ಬಹಳ ಸಮಯವನ್ನು ತೆಗೆದುಕೊಳ್ಳುವುದಿಲ್ಲ, ಬದಲಿಗೆ ಕೆಲವೇ ಕ್ಷಣಗಳಲ್ಲಿ ಅಥವಾ ನಿಮಿಷಗಳಲ್ಲಿ ಹಬ್ಬುತ್ತವೆ. ಇದನ್ನು ಕೇವಲ ಸಣ್ಣಪುಟ್ಟ ಸಂದೇಶಗಳು ಅಥವಾ ಹರಟೆ ಹೊಡೆಯಲು ಬಳಸದೇ ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಕಡಿಮೆ ವೆಚ್ಚದಲ್ಲಿ ಅಥವಾ ಶೂನ್ಯ ವೆಚ್ಚದಲ್ಲಿ ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳ ಮಾರ್ಕೆಟಿಂಗ್ ಮಾಡಿ, ಲಾಭವನ್ನು ಗಳಿಸಿಕೊಳ್ಳಬಹುದು. ಆದರೆ ಅದಕ್ಕಿಂತ ಮೊದಲಾಗಿ ನೀವು ಮಾಡಬೇಕಾದ ಪೂರ್ವ  ಮಾರ್ಕೆಟಿಂಗ್ ಕೆಲಸಗಳಿವೆ. 

ಪೂರ್ವ ಮಾರ್ಕೆಟಿಂಗ್ ಕಾರ್ಯಗಳು

ಮಾರ್ಕೆಟಿಂಗ್ ಮಾಡುವುದು ಸುಲಭದ ಕೆಲಸವಲ್ಲ. ಈ ಕೆಲಸದಲ್ಲಿ ನೀವು ಯಶಸ್ಸು ಗಳಿಸಲು ಬಯಸಿದರೆ, ಅದಕ್ಕೆ ತಕ್ಕ ಪೂರ್ವ ತಯಾರಿ ಮಾಡಿಕೊಳ್ಳಬೇಕು.

 • ನಿಮ್ಮ ಗ್ರಾಹಕರ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಸುಗಮವಾಗಿ ಮತ್ತು ಸಫಲವಾಗಿ ಮಾರ್ಕೆಟಿಂಗ್ ಮಾಡಬೇಕೇ? ಹಾಗಿದ್ದರೆ ನೀವು ಮಾಡಬೇಕಾದ ಪ್ರಥಮ ಕೆಲಸ ನಿಮ್ಮ ಗ್ರಾಹಕರ ಬಗ್ಗೆ ಮತ್ತು ಅವರ ಅಗತ್ಯತೆಗಳ ಬಗ್ಗೆ ತಿಳಿದುಕೊಳ್ಳುವುದು. ಅದಕ್ಕಾಗಿ ನಿಮ್ಮ ಮಾರುಕಟ್ಟೆ, ನಿಮ್ಮ ಗ್ರಾಹಕರ ಬಗ್ಗೆ ಸಂಶೋಧನೆ ಮಾಡಿ. ಸಾಮಾನ್ಯವಾಗಿ ಎಲ್ಲರೂ ಮಾರುಕಟ್ಟೆ ಸಂಶೋಧನೆ ದುಬಾರಿ ಎಂದು ಭಾವಿಸುತ್ತಾರೆ. ಹಿಂದಿನ ಕಾಲದಲ್ಲಿ ಇದು ಸತ್ಯವೂ ಆಗಿತ್ತು. ಅದ್ದರೆ ಇಂದಿನ ಇಂಟರ್ನೆಟ್ ಯುಗದಲ್ಲಿ ಮಾರುಕಟ್ಟೆ ಮತ್ತು ಗ್ರಾಹಕರ ಕುರಿತಾದ ಸಂಶೋಧನೆ ಅತ್ಯಂತ ಸುಲಭವಾದದ್ದು. ಇದಕ್ಕೆ ದೊಡ್ಡ ಮೊತ್ತದ ಹಣದ ಅಗತ್ಯವೇನು ಇಲ್ಲ. 

ನಿಮ್ಮ ಉತ್ಪನ್ನ ಅಥವಾ ಸೇವೆ ಚಿಕ್ಕದೇ ಇರಲಿ ಅಥವಾ ದೊಡ್ಡದೇ ಇರಲಿ ನೀವು ಅಗತ್ಯ ರೀತಿಯಲ್ಲಿ ಮಾರುಕಟ್ಟೆಯ ಕುರಿತಾದ ಸಂಶೋಧನೆ ಮಾಡದೇ ಇದ್ದರೇ, ನಿಮ್ಮ ಉತ್ಪನ್ನಗಳ ಮಾರಾಟ ಯಶಸ್ಸು ಕಾಣುವುದು ಕಷ್ಟಸಾಧ್ಯ.

 • ನಿಮ್ಮ ಬ್ರಾಂಡ್ ಅನ್ನು ಆಕರ್ಷಕವಾಗಿಸಿ 

“Your brand is what other people say about you when you are not in the room? (ನೀವು ಕೋಣೆಯಲ್ಲಿ ಇಲ್ಲದೇ ಇರುವಾಗ, ನಿಮ್ಮ ಸುತ್ತಲಿದ್ದ ಜನ ನಿಮ್ಮ ಬಗ್ಗೆ ಏನು ಮಾತನಾಡುತ್ತಾರೋ ಅದೇ ನಿಮ್ಮ ಬ್ರಾಂಡ್ ” – ಜೆಫ್ ಬೆಝೋಸ್, CEO, ಅಮೆಜಾನ್.

ಯಾವುದೇ ಕಂಪನಿಗೆ ಬ್ರಾಂಡ್ ಅತ್ಯಂತ ಮುಖ್ಯ. ಅದು ಸಂಸ್ಥೆಯ ಮೂಲ ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ. ಹಾಗಾಗಿ ನಿಮ್ಮ ಬಿಸಿನೆಸ್ ಅಥವಾ ವ್ಯವಹಾರವನ್ನು ಪ್ರಾರಂಭಿಸುವ ಮೊದಲೇ ನಿಮ್ಮ ಬ್ರಾಂಡ್ ಅನ್ನು ನಿರ್ಮಿಸಿ. ವ್ಯಾಪಾರ ಮಾಡುವುದೆಂದರೆ ಕೇವಲ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದು ಎಂದರ್ಥವಲ್ಲ. ಕೇವಲ ಉತ್ಪನ್ನಗಳ ಮಾರಾಟದ ಬಗ್ಗೆ ನಿಮ್ಮ ಗಮನ ಕೇಂದ್ರೀಕರಿಸುವುದರಿಂದ ನಿಮ್ಮ ವ್ಯವಹಾರವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಮೊದಲು ನಿಮ್ಮ ಸಂಸ್ಥೆಗೆ ಸಂಬಂಧಿತ ಬ್ರಾಂಡ್ ಅನ್ನು ರಚಿಸಿ. ಉದಾಹರೆಣೆಗೆ ನಿಮ್ಮ ಕಂಪನಿಯ ಹೆಸರು, ನಿಮ್ಮ ಕಂಪನಿಯ ಉತ್ಪನ್ನಗಳು ಮತ್ತು ಸೇವೆಗಳ ಹುಣಮಟ್ಟ, ಅಗತ್ಯತೆಗೆ ತಕ್ಕಂತೆ ನಿಮ್ಮ ಕಂಪನಿಯ ಬದಲಾಗುವ ಸಾಮರ್ಥ್ಯ, ಬಲವಾದ ಸೋಶಿಯಲ್ ಮೀಡಿಯಾ ಉಪಸ್ಥಿತಿ ಮತ್ತು ಗ್ರಾಹಕರೊಂದಿಗಿನ ಸಂಬಂಧ  – ಇವೆಲ್ಲವುಗಳು ಕಂಪನಿ ಬ್ರಾಂಡಿಂಗ್ ನ ಅಂಶಗಳು.

 • ಗ್ರಾಹಕರನ್ನು ಆಕರ್ಷಿಸಿ

ಉತ್ಪನ್ನಗಳನ್ನು ಅಥವಾ ಸೇವೆಗಳನ್ನು ಮಾರಾಟ ಮಾಡುವುದಷ್ಟೇ ನಿಮ್ಮ ಗುರಿಯಾಗಿಸಿಕೊಳ್ಳದೆ, ಗ್ರಾಹಕರನ್ನು ನಿಮ್ಮ ಉತ್ಪನ್ನಗಳಿಗೆ ಅಥವಾ ಸೇವೆಗಳಿಗೆ ಯಾವಾಗಲೂ ಆಕರ್ಷಿತರಾಗಿರಲು ಅಗತ್ಯವಿರುವ  ಕ್ರಮಗಳನ್ನು ತೆಗೆದುಕೊಳ್ಳಿ. ಉದಾಹರೆಣೆಗೆ ನಿಮ್ಮ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದು, ಕಂಪನಿ ಬಗ್ಗೆ ಅಥವಾ ಕಂಪನಿ ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಬ್ಲಾಗ್ ಬರೆದು, ಪ್ರಕಟಿಸುವುದು, ಸೋಶಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಗಳನ್ನು ಅಥವಾ ವಿಡಿಯೋ ಗಳನ್ನು ಪ್ರಕಟಿಸುವುದು. ಇಂತಹ ಕ್ರಮಗಳನ್ನು ನಿರ್ವಹಿಸುವುದರಿಂದ ನಿಮ್ಮ ಗ್ರಾಹಕರನ್ನು ಯಾವಾಗಲೂ ನಿಮ್ಮ ಕಂಪನಿಗೆ ಮತ್ತು ನಿಮ್ಮ ಬ್ರಾಂಡ್ ಗೆ ಆಕರ್ಷಿತರಾಗಿರಿಸಿಕೊಳ್ಳಬಹುದು.

 • ಉಚಿತ ಬಹುಮಾನ ನೀಡಿ 

ಉಚಿತ ಬಹುಮಾನ ನೀಡುವುದು ಅತ್ಯಂತ ಪ್ರಭಾವಕಾರಿ ಕ್ರಮವಾಗಿದೆ. ಇದು ಯಾವುದೇ ಲಂಗ ಅಥವಾ ವಯಸ್ಸಿನ ಬೇಧ ಇಲ್ಲದೇ, ಕಂಪನಿ ಬಗ್ಗೆ ಗ್ರಾಹಕರಲ್ಲಿ ಒಳ್ಳೆಯ ಅನಿಸಿಕೆ ಮೂಡಿಸುತ್ತದೆ. ಇದನ್ನು ಹೇಗೆ ಅಳವಡಿಸಬಹುದು? ಅದಕ್ಕೆ ಉತ್ತರ ಇಲ್ಲಿದೆ. ನಿಮ್ಮ ಗ್ರಾಹಕರನ್ನು ಆಕರ್ಷಿಸಲು ಮತ್ತು ಅವರನ್ನು ನಿಮ್ಮ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಉತ್ತಮ ಮಾರ್ಗವೆಂದರೆ ನಿಮ್ಮ ಉತ್ಪನ್ನ ಮತ್ತು ಸೇವೆಯನ್ನು ಪರಿಶೀಲಿಸಲು ಮತ್ತು ಅದರ ಬಗ್ಗೆ ಜಗತ್ತಿಗೆ ತಿಳಿಸಲು ನಿಮ್ಮ ಗ್ರಾಹಕರಿಗೆ ಬಹುಮಾನ ನೀಡುವುದು. ನಿಮ್ಮ ಕಂಪನಿ ಹೊಸತೇ ಆಗಿದ್ದರೂ, ಈ ರೀತಿಯ ಕ್ರಮಗಳನ್ನು ಕೈಗೊಳ್ಳುವುದರಿಂದ ನೀವು ನಿಮ್ಮ ಕಂಪನಿಯ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಜಗತ್ತಿಗೆ ತಿಳಿಸಿ ಕೊಡಬಹುದು. ನಿಮ್ಮ ಉತ್ಪನ್ನಗಳನ್ನು ಬಳಸಿದ ಗ್ರಾಹಕರು ನೀಡುವ ಸಕಾರಾತ್ಮಕ ವಿಮರ್ಶೆಗಳು ನಿಮ್ಮ ಕಂಪನಿಯ ಕುರಿತಾದ ಉತ್ತಮ ಜಾಹಿರಾತಿನಂತೆ ಕಾರ್ಯನಿರ್ವಹಿಸುತ್ತದೆ. 

ವೆಚ್ಚ ರಹಿತ ಅಥವಾ ಶೂನ್ಯ ವೆಚ್ಚದ ಮಾರ್ಕೆಟಿಂಗ್ ತಂತ್ರಗಳು 

ಪರಿಸ್ಥಿತಿಗಳು ಏನೇ ಇರಲಿ, ನೀವು ವೆಚ್ಚ ರಹಿತ ಮಾರ್ಕೆಟಿಂಗ್ ಮಾಡಲು ಬಯಸಿದಲ್ಲಿ, ಅತ್ಯಂತ ಯೋಜನಾಬದ್ಧವಾಗಿ, ಚಾಕಚಕ್ಯತೆ ಇಂದ, ಲಭ್ಯವಿರುವ ಸೌಕರ್ಯಗಳನ್ನು ಅಥವಾ ಅವಕಾಶಗಳನ್ನು ಬಳಸಿಕೊಂಡು ಉತ್ಪನ್ನಗಳ ಅಥವಾ ಸೇವೆಗಳ ಮಾರ್ಕೆಟಿಂಗ್ ಮಾಡಬೇಕು.

ಸರ್ಚ್ ಎಂಜಿನ್ ಗಳು ನಿಮ್ಮ ವೆಬ್ಸೈಟ್ ಗುರುತಿಸುವಂತೆ ಮಾಡಿ 

ನಿಮಗೆ ಯಾವುದೊ ವಿಷಯದ ಬಗ್ಗೆ ತಿಳಿಯಬೇಕೆನಿಸಿದಾಗ ನೀವು ಸಾಮಾನ್ಯವಾಗಿ ಏನು ಮಾಡುತ್ತೀರಿ? ನಿಮ್ಮ ಮೊಬೈಲ್ ಹೊರ ತೆಗೆದು “google.com” ಎಂದು ಟೈಪ್ ಮಾಡಿ enter ಒತ್ತುತ್ತಿರಿ. ಗೂಗಲ್ ಸರ್ಚ್ ಎಂಜಿನ್ ತೆರೆದ ಕೂಡಲೇ, ನಿಮಗೆ ಅಗತ್ಯವಿರುವ ವಿಷಯದ ಬಗ್ಗೆ ಕೇಳುತ್ತೀರಿ. ಆಗ ಗೂಗಲ್ ನಿಮ್ಮ ಪ್ರಶ್ನೆಗೆ ಸಂಬಂಧಿತ ಹತ್ತು-ಹಲವಾರು ಉತ್ತರವನ್ನು, ವೆಬ್ಸೈಟ್ ಗಳನ್ನು ನೀಡುತ್ತದೆ. ಈ ರೀತಿಯ ವೆಬ್ಸೈಟ್ ಗಳಲ್ಲಿ ನಿಮ್ಮ ವೆಬ್ಸೈಟ್ ಬರುವಂತೆ ಮಾಡುವುದಕ್ಕೆ ಸರ್ಚ್ ಎಂಜಿನ್ ಆಪ್ಟಿಮೈಸ್ಡ್ ವೆಬ್ಸೈಟ್ ಎನ್ನುತ್ತಾರೆ. ಅಂದರೆ ಗೂಗಲ್ ನಲ್ಲಿ ಹುಡುಕಲು ಸುಲಭವಾಗುವಂತೆ ಮಾಡುವುದು. 

ಸಾಮಾನ್ಯವಾಗಿ, ಅಂತರ್ಜಾಲದಲ್ಲಿ ಎಷ್ಟು ವಿಷಯಗಳು ಅಥವಾ ಮಾಹಿತಿಗಳು ಇದೆಯೆಂದರೆ, ಆಯಾ ಸರ್ಚ್ ಇಂಜಿನ್ ಗಳ ಸಂಸ್ಥಾಪಕರಿಗೂ ತಿಳಿದಿದೆಯೋ, ಇಲ್ಲವೋ. ಪ್ರಸ್ತುತ ಕಾಲದಲ್ಲಿ, ಭಾರತದಲ್ಲಿರುವ ಸರ್ಚ್ ಇಂಜಿನ್ ಗಳೆಂದರೆ ಗೂಗಲ್, ಕ್ರೋಮ್, ಯುಸಿ ಬ್ರೌಸರ್, ಇತ್ಯಾದಿ. ಆದರೆ ಪ್ರಪಂಚದಾದ್ಯಂತ ಇನ್ನೂ ಹತ್ತು ಹಲವಾರು ಸರ್ಚ್ ಇಂಜಿನ್ ಗಳಿವೆ. ಇಂತಹ ಸರ್ಚ್ ಎಂಜಿನ್ ಗಳ ಫಲಿತಾಂಶಗಳಲ್ಲಿ ನಿಮ್ಮ ವೆಬ್ಸೈಟ್ ಗಳು ಬರುವಂತೆ ಏಕೆ ಮಾಡಬೇಕು ಮತ್ತು ಹೇಗೆ ಮಾಡಬೇಕು?

ಹಳೆಯ ಕಾಲದಲ್ಲಿ ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಜಗತ್ತಿಗೆ ತಿಳಿಸಿಕೊಡಲು ವರ್ಷಗಳೇ ಬೇಕಾಗುತ್ತಿದ್ದವು. ಆದರೆ ಈಗಿನ ಇಂಟರ್ನೆಟ್ ಸೌಲಭ್ಯದಿಂದ ಇಡೀ ಜಗತ್ತೇ ನಿಮ್ಮ ಉತ್ಪನ್ನಗಳ ಬಗ್ಗೆ ಅಥವಾ ಸೇವೆಗಳ ಬಗ್ಗೆ ಕ್ಷಣಾರ್ಧದಲ್ಲಿ ತಿಳಿದುಕೊಳ್ಳಬಹುದು. 

ನಿಮ್ಮ ವೆಬ್ಸೈಟ್ ಅನ್ನು ಸರ್ಚ್ ಎಂಜಿನ್ ಫಲಿತಾಂಶಗಳಲ್ಲಿ ಬರಬೇಕೆಂದರೆ ಹೀಗೆ ಮಾಡಿ:

 • ನಿಮ್ಮ ವೆಬ್ಸೈಟ್ ಗಳಲ್ಲಿ ನಿಮ್ಮ ಕಂಪನಿಯ ಉತ್ಪನ್ನಗಳು, ಸೇವೆಗಳು, ಸರಕಿನ ಮಾಹಿತಿ, ನಿಮ್ಮ ಕಂಪನಿಯ ಮೂಲ್ಯಗಳು, ಅದು ತೆಗೆದುಕೊಳ್ಳುವ ಅವಧಿ ಹಾಗೂ ಅಗತ್ಯವಿರುವ ಇತರ ಮೂಲಭೂತ ಅಂಶಗಳನ್ನು ನಿಮ್ಮ ವೆಬ್ಸೈಟ್ ನಲ್ಲಿ ಸೇರಿಸಿ. ಇದರಿಂದ ಸುಲಭವಾಗಿ ದೇಶದಾದ್ಯಂತ ಮತ್ತು ಪ್ರಪಂಚದಾದ್ಯಂತ ಗ್ರಾಹಕರನ್ನು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಸಹಾಯ ಮಾಡುತ್ತದೆ. 
 • ನಿಮ್ಮ ವೆಬ್ಸೈಟ್ ನಲ್ಲಿ ಗ್ರಾಹಕರು, ಪ್ರೇಕ್ಷಕರು ಅಥವಾ ನೋಡುಗರಿಗೆ ಅರ್ಥವಾಗುವ ರೀತಿಯಲ್ಲಿ ಸುಲಭವಾಗಿ, ಮಾಹಿತಿಗಳನ್ನು ನೀಡಿದ್ದಲ್ಲಿ, ಎಲ್ಲಾ ಬಗೆಯ ಮತ್ತು ವರ್ಗದ ಗ್ರಾಹಕರನ್ನು ಅಂದರೆ ಬುದ್ಧಿವಂತ/ಮಧ್ಯಮ/ಕೆಳಮಟ್ಟದ ಗ್ರಾಹಕರನ್ನು ಕೂಡ ಸಂಪಾದನೆ ಮಾಡಬಹುದು.
 • ಸರಕು ಅಥವಾ ಸೇವೆಯನ್ನು ಪಡೆಯಲು ಆಸೆ ಪಡುವ ಗ್ರಾಹಕರಿಗೆ ಯಾವುದೇ ಇರಿಸುಮುರುಸುಗಳನ್ನು ಸೃಷ್ಟಿಸದೆ ಆದಷ್ಟು ಅವರು ಒಪ್ಪುವ ರೀತಿಯಲ್ಲಿ ಸರಕು ಅಥವಾ ಸೇವೆಗಳನ್ನು ಒದಗಿಸುವಂತೆ ವೆಬ್ಸೈಟ್ ರಚಿಸಬೇಕು. 
 • ವೆಬ್ಸೈಟ್ ಗಳಲ್ಲಿ ನಡೆಸುವ ವ್ಯವಹಾರಗಳು ಆದಷ್ಟು ಪಾರದರ್ಶಕವಾಗಿ, ಗ್ರಾಹಕರು ಅನುಮಾನ ರಹಿತವಾಗಿ ಸರಕು ಅಥವಾ ಸೇವೆಗಳನ್ನು ಪಡೆಯುವಂತಾಗಬೇಕು.
 • ಪ್ರತಿಯೊಬ್ಬ ಗ್ರಾಹಕರಿಗೂ ತಾವು ಪಡೆದ ಸೇವೆಯ ಮೇಲೆ ರೇಟಿಂಗ್ಸ್ ಅಥವಾ ಅವರ ಅನಿಸಿಕೆ ಅಭಿಪ್ರಾಯಗಳನ್ನು ತಿಳಿದುಕೊಂಡು ಏನಾದರೂ ತಪ್ಪು ಗಳಿದ್ದಲ್ಲಿ ಅಥವಾ ಕುಂದುಕೊರತೆಗಳಿದ್ದಲ್ಲಿ ಬದಲಾಯಿಸಿಕೊಂಡು, ಜನರ ನಿರೀಕ್ಷೆಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿರಬೇಕು. ಅದರೊಂದಿಗೆ ಲಾಭವನ್ನೂ ನೀಡಬೇಕು.
 • ನೀವು ರಚಿಸುವ ವೆಬ್ಸೈಟ್ ಅಗತ್ಯವಾಗಿರುವ ಎಲ್ಲಾ ಮಾಹಿತಿಯನ್ನು ನೀಡಬೇಕು. ಅಕಸ್ಮಾತಾಗಿ ಸಂಪೂರ್ಣ ಮಾಹಿತಿ ನೀಡಲು ಆಗದೇ ಇದ್ದರೂ, ಕನಿಷ್ಟ ಪಕ್ಷ ಉತ್ಪನ್ನಗಳ ಬಗ್ಗೆ ಮತ್ತು ಸೇವೆಗಳ ಬಗ್ಗೆ ಸಂಕ್ಷಿಪ್ತವಾಗಿ ಅವಶ್ಯಕತೆಗೆ ತಕ್ಕಂತೆ ಮಾಹಿತಿಯನ್ನು ನೀಡಿ ಗ್ರಾಹಕರನ್ನು ಸೆಳೆಯುವಂತಿರಬೇಕು.
 • ನಿಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಬಿಸಿನೆಸ್ ಡೈರೆಕ್ಟರಿ ಗಳಲ್ಲಿ ಸೇರಿಸಿ 

ಗ್ರಾಹಕರು ಅಥವಾ ಹೂಡಿಕೆದಾರರು ಸುಲಭವಾಗಿ ಮತ್ತು ಸರಿಯಾಗಿ ಸರಕು ಅಥವಾ ಸೇವೆ ಪೂರೈಸುವವರನ್ನು ಹೆಸರಾಂತ ಬಿಸಿನೆಸ್ ಡೈರೆಕ್ಟರಿ ಗಳಲ್ಲಿ ಹುಡುಕುತ್ತಾರೆ. ಹಾಗಾಗಿ ನೀವು ನಿಮ್ಮ ಉತ್ಪನ್ನಗಳ ಬಗ್ಗೆ ಮತ್ತು ಸೇವೆಗಳ ಬಗ್ಗೆ ಸರಿಯಾದ ಬೆಲೆ ಹಾಗೂ ಅಗತ್ಯ ಮಾಹಿತಿಗಳೊಂದಿಗೆ ಬಿಸಿನೆಸ್ ಡೈರೆಕ್ಟರಿ ಗಳಲ್ಲಿ ಸೇರಿಸುವುದು ಅತ್ಯಂತ ಉಪಯೋಗಕಾರಿ. ಅದರಿಂದ ನಿಮ್ಮ ಉತ್ಪನ್ನಗಳ ಬಗ್ಗೆ ಮತ್ತು ಸೇವೆಗಳ ಬಗ್ಗೆ ವೆಚ್ಚ ರಹಿತವಾಗಿ ಮಾರ್ಕೆಟಿಂಗ್ ಆಗುತ್ತದೆ.  

ಸಾಮಾನ್ಯವಾಗಿ ಇಂತಹ ಬ್ಯುಸಿನೆಸ್ ಡೈರೆಕ್ಟರಿ ಗಳಲ್ಲಿ ಹುಡುಕುವವರು ನಂಬಿಕಸ್ತ ಹಾಗೂ ಅನುಭವ ಸಹಿತವಾದಂತಹ ಗ್ರಾಹಕರಾಗಿರುತ್ತಾರೆ. ಆದ್ದರಿಂದ ನಾವು ನಮ್ಮ ಸರಕು-ಸೇವೆಗಳ ಪಟ್ಟಿಯನ್ನು ಸರಳವಾಗಿ ಹಾಗೂ ಆಕರ್ಷಣೀಯವಾಗಿ ಹಾಕುವುದರಿಂದ ಮೇಲ್ವರ್ಗದ ಗ್ರಾಹಕರನ್ನು ಸುಲಭವಾಗಿ ಸೆಳೆಯಬಹುದು. ಪ್ರಚಲಿತದಲ್ಲಿರುವ ಹೆಸರಾಂತ ಬ್ಯುಸಿನೆಸ್ ಡೈರೆಕ್ಟರಿ ಗಳೆಂದರೆ ಇಂಡಿಯಾ ಮಾರ್ಟ್ (India mart), ಟ್ರೇಡ್ ಇಂಡಿಯಾ (trade India) ಹಾಗೂ ಇಂಡಿಯನ್ ಯಲ್ಲೋ ಪೇಜ್ (Indian yellow pages) ಹಾಗೂ ಜಸ್ಟ್ ಡಯಲ್ (just Dial) ಹಾಗೂ ಮತ್ತಿತರ ಬ್ಯುಸಿನೆಸ್ ಡೈರೆಕ್ಟರಿ ಗಳು. ಬಿಸಿನೆಸ್ ಡೈರೆಕ್ಟರಿ ಗಳು ಮೊಬೈಲ್ ಗಳಿಗೆ ಪ್ರತ್ಯೇಕ ಅಪ್ಪ ಗಳನ್ನೂ ಒದಗಿಸುತ್ತವೆ. ಇದರಿಂದ ನೀವು ಸುಲಭವಾಗಿ ಗ್ರಾಹಕರನ್ನು ತಲುಪಬಹುದು ಹಾಗೂ ನಿಖರ ತಂತ್ರಾಂಶಗಳನ್ನು ತಿಳಿಯಬಹುದು. ಇದರಿಂದ ವ್ಯವಹಾರದಲ್ಲಿ ಆದಷ್ಟು ಹೆಚ್ಚಿನ ಪಾರದರ್ಶಕತೆಯನ್ನು ಸಹ ಗಳಿಸಿಕೊಳ್ಳಬಹುದು. ಈ ರೀತಿ ಬ್ಯುಸಿನೆಸ್ ಡೈರೆಕ್ಟರಿ ಗಳಲ್ಲಿ ನಿಮ್ಮ  ಮಾಹಿತಿಯನ್ನು ಸೇರ್ಪಡೆ ಮಾಡುವುದರಿಂದ ನಿಮ್ಮ ಸರಕು-ಸೇವೆಗಳ ಮೇಲೆ ಗ್ರಾಹಕರಿಗೆ ಒಲವು ಹಾಗೂ ಒಂದು ರೀತಿಯ ನಂಬಿಕೆ ಸೃಷ್ಟಿಯಾಗುತ್ತದೆ. 

ಇದರಿಂದ ನೀವು ಸುಲಭವಾಗಿ ನಿಮ್ಮ ಗುರಿಯನ್ನು ತಲುಪಬಹುದು.

“ಗೂಗಲ್ ಮೈ ಬಿಸಿನೆಸ್ (Google my business)” ನಲ್ಲಿ ನಿಮ್ಮ ಕಂಪನಿಯನ್ನು ಸೇರಿಸಿ

ನಾವೆಲ್ಲಾ ಸಾಮಾನ್ಯವಾಗಿ, ನಾವು ಕಾಣದ ಊರಿಗೆ ಹೋದರೆ ನಮಗೆ ಸ್ಥಳದ ಹೆಸರುಗಳು ತಿಳಿದಿರುತ್ತವೆ ಆದರೆ ಅದನ್ನು ತಲುಪುವ ಹಾದಿ ತಿಳಿದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ನಮಗೆ ಸಹಾಯ ಮಾಡುವುದು Google map. ಅದರೊಂದಿಗೆ ಗೂಗಲ್ ಮ್ಯಾಪ್ ಗ್ರಾಹಕರಿಕೆ ಅಗತ್ಯವಿರುವ ಸುತ್ತಮುತ್ತಲಿನ ಹೋಟೆಲ್ ಗಳ ಬಗ್ಗೆ, ಅಂಗಡಿಗಳ ಬಗ್ಗೆ, ಪೆಟ್ರೋಲ್ ಬಂಕ್ ಗಳ ಬಗ್ಗೆ ಮತ್ತು ಇನ್ನಿತರ ವಿಷಯಗಳನ್ನು ಲಭ್ಯವಿರುವ ಆಯ್ಕೆಗಳಾಗಿ ತೋರಿಸುತ್ತದೆ. ಅಂತೆಯೇ ನೀವು ಮಾಡುತ್ತಿರುವ ವ್ಯವಹಾರದ ಮಾಹಿತಿಯನ್ನು ಸಹ ಗೂಗಲ್ ನಲ್ಲಿ ಸೇರಿಸಬಹುದು. ಅದರ ಹೆಸರೇ “ಗೂಗಲ್ ಮೈ ಬಿಸಿನೆಸ್ (Google my business)” 

ಗೂಗಲ್ ಮೈ ಬಿಸಿನೆಸ್ ನ ಲಾಭಗಳೆಂದರೆ ನಿಮ್ಮ ಹತ್ತಿರದಲ್ಲಿರುವ ಸರಕು ಅಥವಾ ಸೇವೆಗಳ ಆಕಾಂಕ್ಷಿಗಳಿಗೆ ನಿಮ್ಮ ವಿಳಾಸವನ್ನು ತಿಳಿಸಿ ನೀವು ಅವರೊಂದಿಗೆ ಸಂಧಿಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ನೀವು ನಿಮ್ಮ ವ್ಯವಹಾರವನ್ನು ಸುಲಭವಾಗಿ ಪ್ರಾರಂಭಿಸಬಹುದು. ಗೂಗಲ್ ಮೈ ಬಿಸಿನೆಸ್ ಹತ್ತಿರದ ಗ್ರಾಹಕರನ್ನು ತಲುಪಲು ಬಹಳ ಸಹಕಾರಿಯಾಗಿದೆ. ಹಾಗೂ ಗೂಗಲ್ ನಲ್ಲಿ ಗ್ರಾಹಕರು ನೀಡುವ ಅನಿಸಿಕೆ ಅಭಿಪ್ರಾಯಗಳು ಧನಾತ್ಮಕವಾಗಿ ದ್ದಲ್ಲಿ ಇನ್ನೂ ಹೆಚ್ಚಿನ ಗ್ರಾಹಕರನ್ನು ನಿಮ್ಮ ಉತ್ಪನ್ನಗಳೆಡೆಗೆ ಅಥವಾ ಸೇವೆಗಳೆಡೆಗೆ ಸೆಳೆಯಲು ಸಹಾಯ ಮಾಡುತ್ತದೆ. ಇದರ ಸಹಾಯದಿಂದ ನೀವು ನಿಮ್ಮ ಉತ್ಪನ್ನಗಳಿಗೆ ಅಥವಾ ಸೇವೆಗಳಿಗೆ ಅಗತ್ಯವಿರುವ ಒಂದು ಸುಲಲಿತವಾದ ಮಾರುಕಟ್ಟೆಯನ್ನು ನಿರ್ಮಿಸಿ ನಿಮ್ಮದೇ ಆದ ಒಂದು ಛಾಪನ್ನು ಮೂಡಿಸಲು ನೆರವಾಗುತ್ತದೆ.

ಸಾಮಾಜಿಕ ಜಾಲತಾಣದ ಶಕ್ತಿಯನ್ನು ಬಳಸಿಕೊಳ್ಳಿ 

ಪ್ರಸ್ತುತ ಯುವ ಜನತೆಯನ್ನು ಅಥವಾ ಒಂದು ರೀತಿ ಎಲ್ಲಾ ಜನತೆಯನ್ನು ತನ್ನ ಮಾದಕತೆಯಿಂದ ತನ್ನತ್ತ ಸೆಳೆದು ಅಡಗಿಸಿ ಕೊಳ್ಳುತ್ತಿರುವ ಮಾಧ್ಯಮವೇ ಸಾಮಾಜಿಕ ಜಾಲತಾಣಗಳು. ಇಂತಹ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎಲ್ಲ ರೀತಿಯ ವಿಷಯಗಳು ಹರಿದಾಡುತ್ತಿರುತ್ತವೆ. ಪ್ರತಿಯೊಬ್ಬರೂ ತಮ್ಮ ಅಗತ್ಯತೆಗಳಿಗೆ ಮತ್ತುಅವಶ್ಯಕತೆಗೆ ತಕ್ಕಂತೆ ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಳ್ಳುತ್ತಾರೆ. ಅದರಲ್ಲಿ ಕೆಲವು ಬುದ್ಧಿವಂತರು ತಮ್ಮ ಹೂಡಿಕೆ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಸಾಮಾಜಿಕ ಜಾಲತಾಣವನ್ನು ಸೂಕ್ತ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಾರೆ. ಇದೆ ರೀತಿಯಲ್ಲಿ ಇದೇ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನಿಮ್ಮ ಉತ್ಪನ್ನಗಳ ಅಥವಾ ಸೇವೆಗಳ ಮಾರ್ಕೆಟಿಂಗ್ ಮಾಡಬಹುದು. ಆದರೆ ಅದನ್ನು ಮಾಡುವ ಮೊದಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ.

ನೀವು ನಿಮ್ಮ ಸರಕು ಅಥವಾ ಸೇವೆಗಳ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂದ, ಚಾಕಚಕ್ಯತೆಯಿಂದ, ಅವಶ್ಯಕತೆ ಇರುವಷ್ಟೇ ಹಾಗೂ ಈಗಿನ ಕಾಲದವರ ಅಥವಾ ಎಲ್ಲ ವರ್ಗದವರಿಗೂ ಅರ್ಥವಾಗುವ ರೀತಿಯಲ್ಲಿ ಮತ್ತು ಆಕರ್ಷಿಸುವ ರೀತಿಯಲ್ಲಿ ನಮೂದಿಸಬೇಕು. 

ಗ್ರಾಹಕರೊಂದಿಗೆ ನಿರಂತರ ಸಂಪರ್ಕದಿಂದಲೂ ದಿನಕ್ಕೊಂದು ಅಥವಾ ವಾರಕ್ಕೆ ನಾಲ್ಕರಿಂದ ಐದು ಮಾಹಿತಿಗಳು ಅಥವಾ ಬದಲಾವಣೆಗಳನ್ನು ಜಾರಿಗೆ ತರಬೇಕು. ಗ್ರಾಹಕರು ಕೊಡುವಂತಹ ಅಥವಾ ಅಪೇಕ್ಷಿಸುವ ಬದಲಾವಣೆಗಳು ಸರಿ ಹೊಂದಿದ್ದಲ್ಲಿ ಮಾರ್ಪಾಡುಗಳನ್ನು ಜಾರಿಗೆ ತಂದು ಅವರೊಂದಿಗೆ ಪಾರದರ್ಶಕ ದಿಂದ ಸಂಪರ್ಕದಲ್ಲಿದ್ದು, ಅವರ ಅಭಿಪ್ರಾಯಗಳನ್ನು ತಿಳಿದುಕೊಂಡು, ಕಂಪನಿಗೆ ಹೇಗೆ ಲಾಭ ಮಾಡಬಹುದು ಎನ್ನುವುದನ್ನು ತಿಳಿದುಕೊಳ್ಳಬೇಕು.

ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಮಾಹಿತಿಗಳನ್ನು ಸೇರಿಸುವುದರಿಂದ, ಇದರ ಜಾಹೀರಾತು ಅಥವಾ ಮೇಲ್ ಪುಟವನ್ನು ವೀಕ್ಷಿಸಿದವರು ತಮಗೆ ಇದರ ಅವಶ್ಯಕತೆ ಇಲ್ಲದಿದ್ದರೂ, ಅವಶ್ಯಕತೆ ಇದ್ದವರಿಗೆ ಕಳುಹಿಸಿ ಅವರು ಸದುಪಯೋಗ  ಪಡೆದುಕೊಳ್ಳುವಂತೆ ಮಾಡಿ ವ್ಯಾಪಾರಸ್ಥ ಅಥವಾ ಸರಕು ಸೇವೆಗಳನ್ನು ಒದಗಿಸುವವರಿಗೆ ಅವಕಾಶವನ್ನು ಮಾಡಿಕೊಡಬಹುದು.

ಪ್ರಶ್ನೆಗಳಿಗೆ ಉತ್ತರಿಸಿ

ಒಂದು ಕಂಪನಿ ತನ್ನ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮಾರಾಟ ಮಾಡುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಗ್ರಾಹಕರನ್ನು ಕಾಪಾಡಿಕೊಳ್ಳುವುದು. ಗ್ರಾಹಕರನ್ನು ನಿಮ್ಮೆಡೆಗೆ ಯಾವಾಗಲೂ ಆಕರ್ಷಿತರಾಗುವಂತೆ ನೀವು ಮಾಡದಿದ್ದರೆ ಅದು ನಿಮ್ಮ ಸಂಸ್ಥೆಯ ಅಥವಾ ಕಂಪನಿಯ ಅವನತಿಗೆ ಕಾರಣವಾಗುವುದು ಖಚಿತ. ಹಾಗಿದ್ದರೆ ನಿಮ್ಮ ಗ್ರಾಹಕರನ್ನು ನಿಮ್ಮ ಅತ್ಯಂತ ಪ್ರಾಮಾಣಿಕ ಗ್ರಾಹಕರನ್ನು ಮಾಡಲು ಏನು ಮಾಡಬೇಕು? ಅವರ ಪ್ರಶ್ನೆಗಳಿಗೆ ಉತ್ತರಿಸಿ.

ಇದು ಯಥೇಚ್ಛವಾಗಿ ಆನ್ಲೈನ್ ವ್ಯಾಪಾರ ಅಥವಾ ಮಾರ್ಕೆಟಿಂಗ್ ಮಾಡುವ ವ್ಯಾಪಾರಸ್ಥರಿಗೆ ಹೆಚ್ಚು ಸಮಂಜಸವಾಗಿರುವ ಮಾರ್ಗ. ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ, ಅಗತ್ಯವಿರುವ ಮಾಹಿತಿಯನ್ನು ನೀಡಿ, ಅವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರುವುದು ಇಂದಿನ ಆನ್ಲೈನ್ ವ್ಯವಹಾರಸ್ಥರಿಗೆ ಅತ್ಯಗತ್ಯ. ನಿಮ್ಮ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ನಿಸ್ಸಂಕೋಚವಾಗಿ ಉತ್ತರ ನೀಡಿ, ಅವರು ನಿಮ್ಮ ಉತ್ಪನ್ನಗಳು ಅಥವಾ ಸೇವೆಗಳ ಬಗ್ಗೆ ಏನಾದರೂ ಕುಂದುಕೊರತೆಗಳ ಬಗ್ಗೆ ಚರ್ಚೆ ಮಾಡಲು ಬಯಸಿದರೆ, ಅಥವಾ ಅವರಲ್ಲಿ ಯಾವುದೇ ಬಗೆಯ ಅಸಮಾಧಾನವಿದ್ದರೆ, ಅವರ ಅಸಮಾಧಾನದ ಮೂಲ ಕಾರಣ ತಿಳಿದುಕೊಂಡು, ಅದನ್ನು ಪರಿಹರಿಸಲು ಪ್ರಯತ್ನಿಸಿ. ಅದು ಆಗದೇ ಇದ್ದರೆ, ಕನಿಷ್ಠ ಪಕ್ಷ ಸಮಾಧಾನವನ್ನಾದರೂ ತಿಳಿಸಿ. ಗ್ರಾಹಕರನ್ನು ಸಮಾಧಾನವಾರಿಸಲು ನೀವು ಯಶಸ್ವಿ ಆದಲ್ಲಿ ನಿಮ್ಮ ವ್ಯಾಪಾರ ಉನ್ನತಿ ಎಡೆಗೆ ಸಾಗುತ್ತದೆ. ಏಕೆಂದರೆ ಈ ರೀತಿ ಗ್ರಾಹಕರ ಪ್ರಶ್ನೆಗಳಿಗೆ ಮತ್ತು ಅವರ ಕಳವಳಗಳಿಗೆ ಸ್ಪಂದಿಸುವ ವ್ಯವಹಾರಸ್ಥರು ಗ್ರಾಹಕರ ಮನಸ್ಸಿನಲ್ಲಿ ಶಾಶ್ವತವಾಗಿ ಮನೆ ಮಾಡುತ್ತಾರೆ. ಇದರಿಂದ ಲಾಭದಾಯಕ ವ್ಯಾಪಾರ ಸುಲಭವಾಗುತ್ತದೆ.

ಗ್ರಾಹಕರ ಪ್ರಶ್ನೆಗಳಿಗೆ  ಮತ್ತು ಅಭಿಪ್ರಾಯಗಳಿಗೆ ನಿಷ್ಠೆಯಿಂದ ಸ್ಪಂದಿಸುವ ಇನ್ನೊಂದು ಉಪಯೋಗವೆಂದರೆ – ಒಂದು ವೇಳೆ ನೀವು ಜನತೆಗೆ ಒದಗಿಸುತ್ತಿರುವ ಉತ್ಪನ್ನಗಳು ಅಥವಾ ಸೇವೆಗಳು ಹಳೆಯದ್ದಾಗಿದ್ದರೆ, ಅದರ ಗುಣಮಟ್ಟ ನಿರೀಕ್ಷೆಗೆ ತಕ್ಕಂತೆ ಇರದಿದ್ದರೆ, ಅದನ್ನು ನಿಮ್ಮ ಗ್ರಾಹಕರು ಬೆರಳು ಮಾಡಿ ತೋರಿಸಿದಾಗ ನೀವು ಅದನ್ನು ಅರಿತು ಕೊಳ್ಳುತ್ತೀರಿ. ಇದರಿಂದಾಗಿ ನೀವು ಸುಧಾರಿಸುವ, ನೀವು ಪ್ರಚಲಿತ ವಿದ್ಯಮಾನವನ್ನು ಅರಿತುಕೊಂಡು ಅದಕ್ಕೆ ಹೊಂದಿಕೊಳ್ಳುವ ಮತ್ತು ನಿಮ್ಮ ಉತ್ಪನ್ನಗಳ ಅಥವಾ ಸೇವೆಗಳ ಗುಣಮಟ್ಟ ಹೆಚ್ಚಿಸುವ ಅವಕಾಶ ದೊರಕುತ್ತದೆ.

ನೆಟ್ ವರ್ಕಿಂಗ್ ಇವೆಂಟ್ ಗಳಲ್ಲಿ ಅಥವಾ ಮೀಟಿಂಗ್ ಗಳಲ್ಲಿ ಭಾಗವಹಿಸಿ

ಕೇವಲ ಆನ್ಲೈನ್ ವೆಬ್ಸೈಟ್  ಗಳಲ್ಲಿ ಅಥವಾ ಸಮಾಜಿಕ ಜಾಲತಾಣಗಳಲ್ಲಿ ಗ್ರಾಹಕರನ್ನು ಗ್ರಹಿಸುವುದಷ್ಟೇ ಅಲ್ಲದೇ, ಭೌತಿಕವಾಗಿ ಸಹ ಗ್ರಾಹಕರನ್ನು ಗ್ರಹಿಸುವ ಕಡೆಗೆ ವ್ಯವಹಾರಸ್ಥರು ಪ್ರಯತ್ನ ಮಾಡಬೇಕು. ನೆಟ್ ವರ್ಕಿಂಗ್ ಇವೆಂಟ್ ಗಳಲ್ಲಿ ಅಥವಾ ಮೀಟಿಂಗ್ ಅಥವಾ ಮಾರ್ಕೆಟಿಂಗ್ ಮೇಳಗಳಲ್ಲಿ ವೀಕ್ಷಕರಾಗಿ ಬಂದವರನ್ನು ಗ್ರಾಹಕರನ್ನಾಗಿ ಮಾಡಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಹಾಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು ನಿಮಗೂ ಹಾಗೂ ನಿಮ್ಮ ಸಂಸ್ಥೆಗೂ ಅತ್ಯಗತ್ಯ.

ಇಂತಹ ಕಾರ್ಯಕ್ರಮಗಳಲ್ಲಿ ಸಂಭಾವ್ಯ ಗ್ರಾಹಕರಿಗೆ ನಿಮ್ಮ ಉತ್ಪನ್ನಗಳಿಗೆ ಅಥವಾ ಸೇವಾವೆಗಳಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಮುಖಾಮುಖಿಯಾಗಿ ತಿಳಿಸಿಕೊಡಬಹುದು. ಮತ್ತು ಇತರ ವಿವರಣೆಗಳೊಂದಿಗೆ ಸಂಭಾವ್ಯ ಗ್ರಾಹಕರನ್ನು, ಗ್ರಾಹಕರನ್ನಾಗಿ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಬಹುದು.

ಇಂದಿನ ಕಾಲದಲ್ಲಿ ಆನ್ಲೈನ್ ಅಥವಾ ವೆಬ್ಸೈಟ್ ಗಳು ಯಾವುದೇ ಬಗೆಯ ವ್ಯವಹಾರಕ್ಕೆ ಅನಿವಾರ್ಯವಾದರೂ, ಅಲ್ಲಿ ಹೆಚ್ಚಿನ ಚಟುವಟಿಕೆ ಹೊಂದಿರದ ವ್ಯವಹಾರಗಳಿಗೆ ಮತ್ತು ವ್ಯವಹಾರಸ್ಥರಿಗೆ ಇಂತಹ ನೆಟ್ ವರ್ಕಿಂಗ್ ಅಥವಾ ಮಾರ್ಕೆಟಿಂಗ್ ಮೇಳಗಳು ಅತ್ಯಂತ ಸಹಕಾರಿಯಾಗಿರುತ್ತವೆ.

ನಿಮ್ಮ ಉತ್ಪನ್ನಗಳನ್ನು ಯೂಟ್ಯೂಬ್ (YouTube) ನಲ್ಲಿ  ಪ್ರದರ್ಶಿಸಿ 

ಸಾಮಾನ್ಯವಾಗಿ ನಾವು ಹಾಡುಗಳು, ಚಲನಚಿತ್ರಗಳು ಹಾಗೂ ಇನ್ನಿತರ ಮನರಂಜನೆಯ ಕಾರ್ಯಕ್ರಮಗಳ ಅಪೇಕ್ಷೆಯೊಂದಿಗೆ YouTube ಅನ್ನು ಬಳಸುತ್ತವೆ. ಆದರೆ ಈ ಒಂದು ಮಾಧ್ಯಮವನ್ನು ನಾವು ನಮ್ಮ ಸರಕು ಅಥವಾ ಸೇವೆಯ ಜಾಹೀರಾತುಗಳ ಮೂಲವಾಗಿ ಬಳಸಿಕೊಳ್ಳಬಹುದು ಎನ್ನುವುದು ನಿಮಗೆ ತಿಳಿದಿದೆಯೇ?

YouTube ಮಾಧ್ಯಮ  ತನ್ನದೇ ಆದ ವಿಶಿಷ್ಟ  ಪ್ರಖ್ಯಾತಿ ಪಡೆದಿದೆ. ಇದನ್ನು ಬಳಸದೇ ಇರುವವರು ಅತಿ ವಿರಳ. ಮಕ್ಕಳಿಗೆ ರೈಮ್ಸ್ ನೋಡಲು ಈ ಮಾಧ್ಯಮ ಬೇಕಾದರೆ, ವಿದ್ಯಾರ್ಥಿಗಳಿಗೆ ಮತ್ತು ವಯಸ್ಕರಿಗೆ ವಿವಿಧ ರೀತಿಯ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಬೇಕು. ಈ ಮಾಧ್ಯಮ ತನ್ನೆಡೆಗೆ ಎಲ್ಲರನ್ನೂ ಸುಲಭವಾಗಿ ಸೆಳೆಯುತ್ತದೆ. 

YouTube ನಂತಹ ಮಾಧ್ಯಮದಲ್ಲಿ ಹೆಚ್ಚಿನ ಜನತೆ ತಾವು ಸಬ್ಸ್ಕ್ರೈಬ್ ಮಾಡಿರುವ ವೆಬ್ಸೈಟ್ ಗಳು ಮತ್ತು ಚಾನೆಲ್ ಗಳ ಮೂಲಕ ವಿವಿಧ ಬಗೆಯ ಸರಕುಗಳ ಮತ್ತು ಸೇವೆಗಳ ಬಗ್ಗೆ ಅರಿತುಕೊಳ್ಳುತ್ತಾರೆ. ಆದ್ದರಿಂದ, ನೀವು ನಿಮ್ಮ ಉತ್ಪನ್ನಗಳ ಬಗ್ಗೆ ಮತ್ತು ಸೇವೆಗಳ ಬಗ್ಗೆ ಸೂಕ್ತವಾದ ಜಾಹಿರಾತುಗಳನ್ನು ಮಾಡಿಸಿದಲ್ಲಿ, ಅದು ನಿಮ್ಮ ಲಾಭದ ಅಪೇಕ್ಷೆ ಸಾಕಾರವಾಗುವಂತೆ ಮಾಡುತ್ತದೆ. ಹಾಗಾಗಿ, YouTube ಕಡಿಮೆ ಖರ್ಚಿನಲ್ಲಿ ಅಥವಾ ಶೂನ್ಯ ಖರ್ಚಿನಲ್ಲಿ ಲಾಭ ಪಡೆಯುವ ಒಂದು ಸುಲಭ ವಿಧಾನವಾಗಿದೆ. 

ಯಾವುದೇ ಬಗೆಯ ಉತ್ಪನ್ನಗಳ ಅಥವಾ ಸೇವೆಗಳ ಮಾರ್ಕೆಟಿಂಗ್ ಮಾಡಲು ನೀವು ಕೋಟಿಗಟ್ಟಲೆ ಆದಾಯವಿರುವ ದೊಡ್ಡ ಕಂಪನಿ ಆಗಬೇಕಾಗಿಲ್ಲ. ಕನಿಷ್ಠ ಬಂಡವಾಳದಲ್ಲಿ ಗರಿಷ್ಟ ಮಾರ್ಕೆಟಿಂಗ್ ಮಾಡುವ ತಂತ್ರಗಳನ್ನು ಸೂಕ್ತವಾಗಿ ಅಳವಡಿಸಿಕೊಂಡರೆ, ನಿಮ್ಮ ಗ್ರಾಹಕರನ್ನು ಆಕರ್ಷಿಸುವುದಾಗಲಿ ಅಥವಾ ನಿಮ್ಮ ವ್ಯವಹಾರದಲ್ಲಿ ಯಶಸ್ವಿ ಗಳಿಸುವುದಾಗಲಿ ಕೈಗೆ ನಿಲುಕದ ಹೆಣ್ಣೇನೂ ಅಲ್ಲ. ಅಷ್ಟೇ ಅಲ್ಲದೇ, ಕೇವಲ ‘ಅಪ್ಪ ಹಾಕಿದ ಆಲದ ಮರ’ಕ್ಕೆ ಜೋತು ಬೀಳದೇ ಅಂದರೆ ಕೇವಲ ಹಳೆಯ ಮಾರ್ಕೆಟಿಂಗ್ ವಿಧಾನಗಳನ್ನು, ರೀತಿ-ರಿವಾಜುಗಳನ್ನು ಅನುಸರಿಸದೇ ಕಾಲಕ್ಕೆ ತಕ್ಕಂತೆ ಹಾಗೂ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿಕೊಂಡು, ತಪ್ಪನ್ನು ತಿದ್ದಿಕೊಂಡು ಸರಕು ಮತ್ತು ಸೇವೆಗಳನ್ನು ಗ್ರಾಹಕರಿಗೆ ಪೂರೈಸಿದರೇ, ಯಶಸ್ವಿ ಮಾರ್ಕೆಟಿಂಗ್ ಜೀವನ ನಿಮ್ಮದಾಗುತ್ತದೆ.